- ತೆರೆಗೆ ಬರಲಿದೆ ಡ್ರಗ್ಸ್ ಜಾಲದಲ್ಲಿ ಸಿಲುಕಿದವರ ಕಥೆ “ಟಕೀಲಾ”
- ಪ್ರವೀಣ್ ನಾಯಕ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ ಚಿತ್ರ.
- ಮುಂದಿನ ತಿಂಗಳು ಬಿಡುಗಡೆ ಆಗಲಿದೆ ಧರ್ಮ ಕೀರ್ತಿರಾಜ್, ನಿಖಿತಾ ಸ್ವಾಮಿ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ
ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ಮರಡಿಹಳ್ಳಿ ನಾಗಚಂದ್ರ ನಿರ್ಮಾಣ ಮಾಡಿರುವ “ಟಕೀಲಾ” ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಪ್ರವೀಣ್ ನಾಯಕ್. ನೈಜ ಕಥೆಗೆ ಹತ್ತಿರವಾದ ಡ್ರಗ್ಸ್ ಸುಳಿಯಲ್ಲಿ ಸಿಲುಕಿದವರ ಕಥೆ ಇದಾಗಿದೆ. ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ನಾಯಕನಾಗಿ, ನಿಖಿತಾ ಸ್ವಾಮಿ ನಾಯಕಿಯಾಗಿ ಮಿಂಚಿದ್ದು, ಸಿನಿಮಾ ಮುಂದಿನ ತಿಂಗಳು ರಾಜ್ಯಾದ್ಯಂತ ತೆರೆಗೆ ಬರಲಿದೆ.
ಮನಸಿನ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಬರೆದ ಕತೆ
ಚಿತ್ರದ ಬಗ್ಗೆ ನಿರ್ದೇಶಕರ ಮಾತು ಹೀಗಿದೆ “ಮನಸಿನ ಸಮಸ್ಯೆಗಳನ್ನು ನೋಡ್ತಾ ನೋಡ್ತಾ ಜನರ ಮನಸ್ಥಿತಿ ಅವಲೋಕಿಸಿದಾಗ ಎಲ್ಲರಿಗೂ ಒಂದಲ್ಲ ಒಂದು ಚಿಂತೆಯಿರುತ್ತದೆ ಅಂತ ತಿಳಿಯುತ್ತದೆ. ಮನಸಿನ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಕತೆ ಮಾಡಿದ್ದೇವೆ. ಮನುಷ್ಯನಿಗೆ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ನಮ್ಮ ಚಿತ್ರದ ಮೂಲಕ ಹೇಳಿದ್ದೇನೆ. ತಡವಾಗಿ ತೆಗೆದುಕೊಂಡ ನಿರ್ಧಾರಗಳು ವ್ಯರ್ಥ, ಚಟಗಳು ಅತಿಯಾದಾಗ ಏನು ಬೇಕಾದರೂ ಆಗಬಹುದು, ಡ್ರಗ್ಸ್ ಅನ್ನೋದು ಒಂದು ಸುಳಿ ಇದ್ದಹಾಗೆ, ಅದನ್ನು ಕುತೂಹಲದಿಂದ ಮುಟ್ಟಿ ನೋಡೋ ಪ್ರಯತ್ನ ಮಾಡಬಾರದು ಅನ್ನೋದು ಚಿತ್ರದ ಕಾನ್ಸೆಪ್ಟ್. ಸಿನಿಮಾದಲ್ಲಿ ಸ್ವಲ್ಪ ಅಡಲ್ಟ್ ಕಂಟೆಂಟ್ ಕೂಡ ಬರುತ್ತೆ, ಹಾಗಂತ ಯಾವುದನ್ನೂ ವಲ್ಗರ್ ಆಗಿ ತೋರಿಸಿಲ್ಲ, ಕ್ಲಾಸ್ ಆಗಿ ಹೇಳೋ ಪ್ರಯತ್ನ ಮಾಡಿದ್ದೇನೆ. ಸೈಕಾಲಜಿ ಜತೆಗೆ ಸ್ಪಿರಿಚುಯಾಲಿಟಿ ಬೆರೆಸಿ ಮಾಡಿದ ಚಿತ್ರ ಇದು” ಎಂದಿದ್ದಾರೆ.
ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್, ಜಯರಾಜ್, ಸುಶ್ಮಿತಾ ಮುಂತಾದವರ ಅಭಿನಯವಿದೆ. ಗಿರೀಶ್ ಸಂಕಲನ, ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಪ್ರಶಾಂತ್ ಅವರ ಕಲಾನಿರ್ದೇಶನ ಚಿತ್ರಕ್ಕಿದೆ.