- ಶೂಟಿಂಗ್ ಪ್ರಾರಂಭಿಸಿದ “ಸರ್ಕಾರಿ ನ್ಯಾಯಬೆಲೆ ಅಂಗಡಿ”ಸಿನಿತಂಡ
- ಸಾತ್ವಿಕ್ ಪವನ್ ಕುಮಾರ್, ನಿರ್ದೇಶನದಲ್ಲಿ ಮೂಡಿಬರ್ತಿದೆ ಕಂಟೆಂಟ್ ಆಧಾರಿತ ಸಿನಿಮಾ
- ರಾಗಿಣಿ ದ್ವಿವೇದಿ, ಕುಮಾರ್ ಬಂಗಾರಪ್ಪ ಮುಖ್ಯಭೂಮಿಕೆಯಲ್ಲಿ ಮಿಂಚಲಿದ್ದಾರೆ
ಜಯಶಂಕರ ಟಾಕೀಸ್ ಬ್ಯಾನರ್ ಅಡಿ ತೇಜು ಮೂರ್ತಿ ಮತ್ತು ಎಸ್.ಪದ್ಮಾವತಿ ಚಂದ್ರಶೇಖರ್ ಜಂಟಿಯಾಗಿ ನಿರ್ಮಿಸುತ್ತಿರುವ “ಸರ್ಕಾರಿ ನ್ಯಾಯಬೆಲೆ ಅಂಗಡಿ” ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದಾರೆ ಹಿರಿಯ ನಿರ್ದೇಶಕ ಬಿ.ರಾಮಮೂರ್ತಿ. ಸಾತ್ವಿಕ್ ಪವನ್ ಕುಮಾರ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಟಿ ರಾಗಿಣಿ ದ್ವಿವೇದಿ ಅವರೊಂದಿಗೆ, ನಟ-ರಾಜಕಾರಣಿ ಕುಮಾರ್ ಬಂಗಾರಪ್ಪ, ಹಿರಿಯ ನಟ ದೊಡ್ಡಣ್ಣ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀಗಂಗಾಧರೇಶ್ವರ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ, ಹಿರಿಯ ನಟ ಶ್ರೀನಾಥ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಚಾಲನೆ ನೀಡಿದ್ರು.
ಕಂಟೆಂಟ್ ಓರಿಯೆಂಟೆಡ್ ಮಹಿಳಾ ಪ್ರಧಾನ ಚಿತ್ರ
“ಇದೊಂದು ಗ್ರಾಮೀಣ ಹಿನ್ನೆಲೆಯ ಮಹಿಳಾ ಪ್ರಧಾನ ಕಥಾಹಂದರದ ಫ್ಯಾಮಿಲಿ ಡ್ರಾಮಾ. ನಮ್ಮ ನಡುವೆಯೇ ನಡೆಯುವಂಥ ಅನೇಕ ವಿಷಯಗಳನ್ನು ಈ ಸಿನಿಮಾದಲ್ಲಿ ಚರ್ಚಿಸಿದ್ದೇವೆ. ಈ ಸಿನಿಮಾ ಪ್ರತಿಯೊಬ್ಬ ನೋಡುಗರನ್ನೂ ಯೋಚಿಸುವಂತೆ ಮಾಡುತ್ತದೆ. ಅದರಲ್ಲೂ ಗ್ರಾಮೀಣ ಮಹಿಳೆಯರನ್ನು ಈ ಸಿನಿಮಾ ಶೀಘ್ರ ತಲುಪಲಿದೆ” ಎಂದಿದ್ದಾರೆ ನಿರ್ದೇಶಕರು. ಹಳ್ಳಿಯ ಹೆಣ್ಣು ಮಗಳೊಬ್ಬಳು ತನ್ನ ಊರಿನ ಸರ್ಕಾರಿ ನ್ಯಾಯಬೆಲೆ ಅಂಗಡಿ ವ್ಯವಸ್ಥೆಯಲ್ಲಿ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಎದುರಿಸಿ, ಬಡ ಮತ್ತು ಜನಸಾಮಾನ್ಯರಿಗೆ ಹೇಗೆ ನ್ಯಾಯ ಒದಗಿಸುತ್ತಾಳೆ ಎಂಬುದನ್ನು ಹೇಳುವ ಪ್ರಯತ್ನ ಚಿತ್ರದಲ್ಲಿ ಮಾಡಲಾಗಿದೆಯಂತೆ.
ಈ ಚಿತ್ರದ ವಿಶೇಷವೆಂದರೆ, ಇಬ್ಬರು ಮಹಿಳೆಯರೇ ಸೇರಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ದೊಡ್ಡ ಅರಸಿನಕೆರೆ ಸುತ್ತಮುತ್ತ ಸುಮಾರು 35 ದಿನಗಳ ಕಾಲ ಈ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಈ ಸಾಲಿನ ಕೊನೆಯೊಳಗೆ ಸಿನಿಮಾವನ್ನು ಪ್ರೇಕ್ಷಕರೆದುರು ತರುವ ಯೋಜನೆಯಿದೆ.