- ಅರಳುವ ಮುನ್ನವೇ ಬಾಡಿದ ಉದಯೋನ್ಮುಖ ಪ್ರತಿಭೆ ಕಾಮಿಡಿ ಕಿಲಾಡಿ ರಾಕೇಶ್
- ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಸೀಸನ್ 3 ರ ವಿನ್ನರ್ ರಾಕೇಶ್ ಪೂಜಾರಿ
- ಕನ್ನಡದ “ಪೈಲ್ವಾನ್”, “ಇದು ಎಂಥಾ ಲೋಕವಯ್ಯ”, ತುಳು ಭಾಷೆಯ “ಪೆಟ್ಕಮ್ಮಿ”, “ಅಮ್ಮೆರ್ ಪೊಲೀಸ್” ಮೊದಲಾದ ಸಿನಿಮಾಗಳಲ್ಲಿ ಅಭಿನಯ.
ಕನ್ನಡ ಚಿತ್ರರಂಗದ ಬಹುಮುಖ, ಉದಯೋನ್ಮುಖ ಪ್ರತಿಭೆ, ಸರಳ ವ್ಯಕ್ತಿತ್ವ, ನಗುಮುಖದ ಹುಡುಗ, ತನ್ನ ಮಾತಿನ ಮೂಲಕ ಎಲ್ಲರ ಮುಖದಲ್ಲಿ ನಗುರಳಿಸುತ್ತಿದ್ದ ರಾಕೇಶ್ ಪೂಜಾರಿ Rakesh Poojary ಉಡುಪಿ ಸಮೀಪದ ಹೊಡೆಯ ದಿನಕರ್ ಪೂಜಾರಿ ಹಾಗೂ ಶಾಂಭವಿ ದಂಪತಿಗಳ ಪುತ್ರ. 33 ವರ್ಷ ಪ್ರಾಯದ ರಾಕೇಶ್ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ತಮ್ಮ ಗೆಳೆಯನ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಅವರ ಸಾವು ಅಭಿಮಾನಿಗಳು ಹಾಗೂ ಆಪ್ತ ಬಳಗಕ್ಕೆ ಶಾಕ್ ನೀಡಿದ್ದು, ಸಾವಿಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ.
ನಗುಮೊಗದ ರಾಕೇಶ್ ಪಯಣ ಹೀಗಿತ್ತು
“ಚೈತನ್ಯ ಕಲಾವಿದರು” ತಂಡದ ಮೂಲಕ ತಮ್ಮ ರಂಗಭೂಮಿಯ ಪಯಣ ಆರಂಭಿಸಿದ ರಾಕೇಶ್ ಪೂಜಾರಿ 2014 ರಲ್ಲಿ ಖಾಸಗಿ ಚಾನಲ್ ಒಂದರಲ್ಲಿ “ಕಡ್ಲೆ ಬಜಿಲ್” ಎಂಬ ತುಳು ರಿಯಾಲಿಟಿ ಷೋ ಮೂಲಕ ತುಳುನಾಡಿನ ಜನರ ಮನಗೆದ್ದು ಮನೆಮಾತಾಗಿದ್ದರು. ಅನಂತರ ಸುಮಾರು 150 ಕ್ಕೂ ಹೆಚ್ಚು ಆಡಿಷನ್ ಗಳನ್ನು ನೀಡಿದ್ದ ಇವರು 2018 ರಲ್ಲಿ ಕನ್ನಡದ ಪ್ರಸಿದ್ದ ವಾಹಿನಿ ಜೀ ಕನ್ನಡದ “ಕಾಮಿಡಿ ಕಿಲಾಡಿಗಳು ಸೀಸನ್ 2” ಗೆ ಸೆಲೆಕ್ಟ್ ಆಗಿ ರನ್ನರ್ ಅಪ್ ತಂಡದ ಸದಸ್ಯರಾಗಿದ್ದರು. ಅನಂತರ 2020 ರಲ್ಲಿ ಇದೇ ಷೋ ನ ಸೀಸನ್ 3 ರಲ್ಲಿ ವಿನ್ನರ್ ಆಗಿ ಕನ್ನಡಿಗರ ಹೃದಯ ಗೆದ್ದಿದ್ದರು. ಕನ್ನಡ ಹಾಗೂ ತುಳು ಭಾಷೆಯ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿರುವ ಇವರ ನಟನೆಯ ಕೆಲವು ಸಿನಿಮಾಗಳೆಂದರೆ, ಕನ್ನಡದ “ಪೈಲ್ವಾನ್”, “ಇದು ಎಂಥಾ ಲೋಕವಯ್ಯ”, ತುಳು ಭಾಷೆಯ “ಪೆಟ್ಕಮ್ಮಿ”, “ಅಮ್ಮೆರ್ ಪೊಲೀಸ್”, “ಪಮ್ಮನ್ನೆ ದಿ ಗ್ರೇಟ್”, “ಉಮಿಲ್”, “ಇಲ್ಲೊಕ್ಕೆಲ್” ಮುಂತಾದವು. ಮೇ 11 ರಂದು ಕಾಂತಾರ ಚಾಪ್ಟರ್ 1 ಇದರಲ್ಲಿ ತಮ್ಮ ಪಾತ್ರದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದರು.
ಬೆಳ್ಳಿತೆರೆಯ ಗಣ್ಯರ ಪ್ರತಿಕ್ರಿಯೆ ಹೀಗಿದೆ
ಕಾಮಿಡಿ ಕಿಲಾಡಿ ಶೋದ ತೀರ್ಪುಗಾರರಾಗಿದ್ದ ರಕ್ಷಿತಾ ಪ್ರೇಮ್ ಸಂತಾಪ ಸೂಚಿಸಿದ್ದಾರೆ. “ರಾಕೇಶ್ ಜೊತೆ ಇನ್ನುಮುಂದೆ ಮಾತನಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ನನಗೆ ಅರಗಿಸಿಕೊಳ್ಳಲು ಆಗ್ತಿಲ್ಲ, ಮೃದು ಸ್ವಭಾವದ ವ್ಯಕ್ತಿತ್ವ, ಮಿಸ್ ಯೂ” ಎಂದು ಅವರು ಬರೆದುಕೊಂಡು ಭಾವುಕರಾಗಿದ್ದಾರೆ.
ಜನಪ್ರಿಯ ನಟ ಜಗ್ಗೇಶ್ ತಮ್ಮ ಎಕ್ಸ್ ಅಕೌಂಟ್ನಲ್ಲಿ, ”ಬಾಳಿ ಬದುಕಬೇಕಾದ ಪ್ರತಿಭೆ ಕಣ್ಮರೆಯಾಯಿತು! ಕಾಮಿಡಿ ಕಿಲಾಡಿಯಲ್ಲಿ ನಮ್ಮೆಲ್ಲರ ಮನುಸ್ಸು ಗೆದ್ದಿದ್ದ ಅದ್ಭುತ ಪ್ರತಿಭೆ 30ರ ಪ್ರಾಯಕ್ಕೆ ನಮ್ಮೆಲ್ಲರ ಅಗಲಿದೆ ಎಂದರೆ ನಂಬಲಾಗದು. ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ”ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗೂ ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ. ಮತ್ತೆ ಹುಟ್ಟಿ ಬಾ ಗೆಳೆಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.
ಜನಪ್ರಿಯ ಆ್ಯಂಕರ್ ಅನುಶ್ರೀ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ”ರಾಕೇಶ. ನಗು ಆರೋಗ್ಯವಾಗಿರುತ್ತೀಯ. ನಗಿಸು ಸುಖವಾಗಿರುತ್ತೀಯ. ಇದೆಲ್ಲ ಸುಳ್ಳು ಅಲ್ವಾ ಮಾರಾಯ! ನಿಂಗೆ ಹೇಗೆ ಹೇಳಲಿ ವಿದಾಯ! ಒಂದಂತೂ ಸತ್ಯ ರಾಕಿ, ನಿನ್ನ ಮುಗುಳ್ನಗು ಅಮರ. ಹೋಗಿ ಬಾ ತಮ್ಮ” ಎಂದು ಬರೆದುಕೊಂಡಿದ್ದಾರೆ.