ಬಣ್ಣದ ಲೋಕದಲ್ಲಿ ಹೆಸರು ಮಾಡಿ ಕೊನೆಗೆ ಎಲ್ಲವನ್ನೂ ತ್ಯಜಿಸಿ ಬೌದ್ಧ ಸನ್ಯಾಸಿನಿ ಆದ ಬರ್ಖಾ ಮದನ್ Barkha Madan ಎಂಬ ಯುವತಿಯ ಕಥೆ ಇಲ್ಲಿದೆ. ಬರ್ಖಾ ಮದನ್ ಬಾಲಿವುಡ್ ನಟಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು. ಸಿನಿಮಾಗೆ ಬರುವ ಮುನ್ನ ಸಾಮಾಜಿಕ ಸೇವೆಯಲ್ಲೂ ಗುರುತಿಸಿಕೊಂಡಿದ್ದರು.
ಬರ್ಖಾ 20 ವರ್ಷದವರಿರುವಾಗ ಐಶ್ವರ್ಯ ರೈ, ಸುಷ್ಮಿತಾ ಸೇನ್ ಭಾಗವಹಿಸಿದ್ದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಖಿಲಾಡಿಯೋ ಕಾ ಖಿಲಾಡಿ, ಭೂತ್, ಸೋಚ್ ಲೋ ಸೇರಿ ಅನೇಕ ಹಿಂದಿ ಸಿನಿಮಾ, ಕಿರುತೆರೆ ಹಾಗೂ ಪಂಜಾಂಬಿ ಸಿನಿಮಾಗಳಲ್ಲಿ ಬರ್ಖಾ ನಟಿಸಿದ್ದರು. ನಿರ್ಮಾಪಕಿಯಾಗಿ ಕೂಡಾ ಬರ್ಖಾ ಗುರುತಿಸಿಕೊಂಡಿದ್ದರು. ಭೂತ್ ಸಿನಿಮಾದಲ್ಲಿ ಬರ್ಖಾ, ಭೂತದ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ಅವರಿಗೆ ಒಳ್ಳೆ ಅವಕಾಶಗಳು ಒದಗಿ ಬಂತು.
ಚಿತ್ರರಂಗದಲ್ಲಿ ಇಷ್ಟೆಲ್ಲಾ ಹೆಸರು ಮಾಡಿದ್ದ ಬರ್ಖಾ ಮದನ್, ಇದ್ದಕ್ಕಿದ್ದಂತೆ ಬಣ್ಣದ ಬದುಕು, ಪಾಶ್ ಜೀವನವನ್ನು ತ್ಯಾಗ ಮಾಡಿ 2012ರಲ್ಲಿ ಟಿಬೆಟ್ ಸೆರಾಜೆನ್ ಮಠದಲ್ಲಿ ಸನ್ಯಾಸತ್ವ ಸ್ವೀಕರಿಸಿದರು.ಬೌದ್ಧಗುರು ದಲೈಲಾಮ ಅವರ ಜೀವನದಿಂದ ಪ್ರೇರಿತರಾದ ಬರ್ಖಾ ಮದನ್ ಲಾಮಾ ಚೋಂಪಾ ರಿಂಪೋಜಿ ಮಾರ್ಗದರ್ಶನದಲ್ಲಿ ದೀಕ್ಷೆ ಪಡೆದು ತಮ್ಮ ಹೆಸರನ್ನು ಕೂಡಾ ಬದಲಿಸಿಕೊಂಡರು.
ಸಂಸಾರ ಎಂಬ ಬಂಧನದಲ್ಲಿ ಸಿಲುಕುವುದು ನನಗೆ ಇಷ್ಟವಿಲ್ಲ. ಆದ್ದರಿಂದ ನಾನು ಸನ್ಯಾಸತ್ವ ಸೀಕ್ವರಿಸಿದೆ ಎಂದು ಬರ್ಖಾ ಮದನ್ ಹೇಳಿಕೊಂಡಿದ್ದಾರೆ. ತಾವು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದು ನನ್ನ ಜೀವನದ ಅತ್ಯುತ್ತಮ ನಿರ್ಧಾರ ಎಂದು ಬರ್ಖಾ ಮದನ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.