- “ಸು ಫ್ರಂ ಸೋ” ಗೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್: ನಗೆಯ ಹಾಯಿದೋಣಿಯಲ್ಲಿ ತೇಲಿ ಹೋದ್ರು ಪ್ರೇಕ್ಷಕರು
- ಸ್ಯಾಂಡಲ್ ವುಡ್ ನಲ್ಲಿ ಸಖತ್ ಸಂಚಲನ ಮೂಡಿಸಿದೆ “ಸು ಫ್ರಂ ಸೋ”.
- ಚಿತ್ರದ ಈ ವಿಭಿನ್ನ ಹೆಸರೇ ಎಲ್ಲರನ್ನೂ ಮೋಡಿ ಮಾಡಿದೆ.
“ಸು ಫ್ರಂ ಸೋ” Su from So ಸಿನಿಮಾ, ಸ್ಯಾಂಡಲ್ ವುಡ್ ನಲ್ಲಿ ಸಖತ್ ಸಂಚಲನ ಮೂಡಿಸಿದೆ. ಈ ಚಿತ್ರದ ಹಾಸ್ಯ ಮತ್ತು ಹಾರರ್ ನ ರಸದೌತಣದ ಸವಿಗೆ ಕನ್ನಡದ ಪ್ರೇಕ್ಷಕರು ಮಾರುಹೋಗಿದ್ದಾರೆ. “ಸು ಫ್ರಂ ಸೋ” ಅಂದ್ರೆ “ಸುಲೋಚನಾ ಫ್ರಂ ಸೋಮೇಶ್ವರ” Sulochana from Someshwara ಚಿತ್ರದ ಈ ವಿಭಿನ್ನ ಹೆಸರೇ ಎಲ್ಲರನ್ನೂ ಮೋಡಿ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲೂ”ಸು ಫ್ರಂ ಸೋ” ಚಿತ್ರದ ಬಗ್ಗೆ ನೂರಾರು ಪೋಸ್ಟ್ ಗಳು ಕಾಣಿಸಿಕೊಳ್ಳುತ್ತಿದೆ. ಎಷ್ಟೋ ಸಮಯದ ಬಳಿಕ ಕನ್ನಡ ಚಿತ್ರರಂಗದಲ್ಲೊಂದು ಸಿನಿಮಾದ ವೈರಲ್ ಫೀವರ್ ಹತ್ತಿಸಿದೆ “ಸು ಫ್ರಂ ಸೋ”.
ಪಕ್ಕಾ ಕರಾವಳಿಯ ಮಣ್ಣಿನ ಸೊಗಡಿನ ಚಿತ್ರ
ಪಕ್ಕಾ ಕರಾವಳಿಯ ಮಣ್ಣಿನ ಪರಿಮಳದ, ಗ್ರಾಮ್ಯ ಸೊಗಡಿನ ಫೀಲ್ ಹೊಂದಿರುವ ಈ ಚಿತ್ರ ಶೇ.100 ರಷ್ಟು ಮನರಂಜನೆ ನೀಡುವುದರಲ್ಲಿ ಯಶಸ್ವಿಯಾಗಿದೆ ಎನ್ನುವುದು ಕನ್ನಡ ಪ್ರೇಕ್ಷಕರ ಮನದಾಳದ ಮಾತು. ಮರ್ಲೂರು ಎನ್ನುವ ಊರಿನಲ್ಲಿ ನಡೆಯುವ ಒಂದು ಪ್ರಸಂಗ ಹೇಗೆ ಇಡೀ ಊರಿನ ಸಮಸ್ಯೆಯಾಗುತ್ತದೆ, ಈ ಸಮಸ್ಯೆ ಹೇಗೆ ಮನರಂಜನೆಗೂ, ಹಾಸ್ಯಕ್ಕೂ, ಭಯಾನಕತೆಗೂ ಕಾರಣವಾಗುತ್ತದೆ, ಕಥಾ ನಾಯಕ ಈ ಪ್ರಸಂಗವನ್ನು ಪರಿಹರಿಸಲು ಯಾವೆಲ್ಲಾ ರೀತಿ ಪ್ರಯತ್ನಿಸ್ತಾನೆ? ಇಂತಹ ಸನ್ನಿವೇಶದಲ್ಲಿ ಊರ ಜನ ಹೇಗೆ ಒಂದಾಗುತ್ತಾರೆ? ಕುತೂಹಲಗಳು, ಭಾವನೆಗಳು ಹೇಗೆ ಮೂಡುತ್ತ ಹೋಗುತ್ತದೆ ಎನ್ನುವುದನ್ನು “ಸು ಫ್ರಂ ಸೋ” ಚಿತ್ರ
ಹೇಳುತ್ತ ಹೋಗುತ್ತದೆ.
ಒಳ್ಳೆಯ ಕತೆ, ಕ್ಲೈಮ್ಯಾಕ್ಸ್, ಭರ್ಜರಿ ಹಾಸ್ಯ
ಒಳ್ಳೆಯ ಕತೆ, ಕ್ಲೈಮ್ಯಾಕ್ಸ್, ಭರ್ಜರಿ ಹಾಸ್ಯವನ್ನೂ ಒಳಗೊಂಡಿರುವ ಈ ಚಿತ್ರದಲ್ಲಿ ನಿರ್ದೇಶಕ ಜೆ.ಪಿ.ತೂಮಿನಾಡು JP Thuminad, ಕತೆ, ಚಿತ್ರಕಥೆ, ನಿರ್ದೇಶನ ಮತ್ತು ನಟನೆಯಲ್ಲಿ ಜಾದೂ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ Raj B Shetty ಪ್ರಮುಖ ಪಾತ್ರದಲ್ಲಿ ಮುಗುಳ್ನಗೆ ಮೂಡಿಸಿದ್ದಾರೆ. ಶನೀಲ್ ಗೌತಮ್,ಪ್ರಕಾಶ್ ಕೆ ತೂಮಿನಾಡು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಪುಷ್ಪರಾಜ್ ಬೋಳಾರ್, ಸಂಧ್ಯಾ ಅರೆಕೆರೆ ಮೊದಲಾದವರ ನಟನೆಗೂ ಪ್ರೇಕ್ಷಕರು ದಿಲ್ ಖುಷ್ ಆಗಿದ್ದಾರೆ. ಸುಮೇಧ್ ಕೆ ಮತ್ತು ಸಂದೀಪ್ ತುಳಸೀದಾಸ್ ಚಿತ್ರದಲ್ಲಿ ಸಂಗೀತಕ್ಕೆ ಜೀವ ತುಂಬಿದ್ದಾರೆ. ಎಸ್ ಚಂದ್ರಶೇಖರನ್ ಕ್ಯಾಮರಾದಲ್ಲಿ ಕರಾವಳಿ ಚೆಂದವನ್ನೂ ಇನ್ನಷ್ಟು ರಂಗೇರಿಸಿದ್ದಾರೆ. ಅಂದ ಹಾಗೆ ನಟ ರಾಜ್ ಬಿ ಶೆಟ್ಟಿ ಅವರು, ಶಶಿಧರ್ ಶೆಟ್ಟಿ ಬರೋಡ, ರವಿ ರೈ ಕಳಸ ಅವರ ಜೊತೆಯಾಗಿ ಈ ಸಿನಿಮಾ ನಿರ್ಮಿಸಿದ್ದಾರೆ. ರಿಲೀಸ್ ಆದ ದಿನದಿಂದಲೂ ಪ್ರೇಕ್ಷಕರಿಂದ “ಸು ಫ್ರಂ ಸೋ”ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿರೋದು ಕನ್ನಡ ಚಿತ್ರರಂಗದಲ್ಲಿ ಹೊಸ ಆಶಾ ಭಾವನೆ ಮೂಡಿಸಿದೆ.