- ಬೆಳ್ಳಿತೆರೆಗೆ ಬರುತ್ತಿದೆ ಬಂಜಾರ ಸಮುದಾಯದ “ಗೋರ್ ಗಡ್”
- ಚಿತ್ರೀಕರಣ ಪ್ರಾರಂಭಕ್ಕೂ ಮೊದಲೇ ಟೀಸರ್ ಬಿಡುಗಡೆ
- ದಾವಣಗೆರೆಯ ಶಶಿಕುಮಾರ್ ಜೆ.ಕೆ ಯವರ ಚಿತ್ರಕಥೆ, ಸಂಭಾಷಣೆ, ನಿರ್ದೇಶನವಿದೆ.
- ಡಿ.ಎಸ್.ಕೆ. ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ, ನಾಯಕನಾಗಿ ಧನುಷ್ ನಾಯ್ಡು ಅಭಿನಯ
ಬಂಜಾರ ಭಾಷೆಯಲ್ಲಿ ಸಾಮಾನ್ಯವಾಗಿ ಚಿತ್ರಗಳು ಮೂಡಿಬರುತ್ತಿದ್ದು, ಗೋರ್ ಗಡ್ ಚಿತ್ರವೂ ಈ ಸಾಲಿಗೆ ಸೇರಲಿದೆ. ಸಿನಿಮಾ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದ್ದು, ಚಿತ್ರೀಕರಣ ಪ್ರಾರಂಭಕ್ಕೆ ಮೊದಲು ಟೀಸರ್ ಬಿಡುಗಡೆಗೊಳಿಸಲಾಗಿದೆ.
ಲಂಬಾಣಿ ಆಚಾರ, ವಿಚಾರಗಳನ್ನು ಉಳಿಸುವ ಪ್ರಯತ್ನ
ನಿರ್ದೇಶಕ ಶಶಿಕುಮಾರ್ ಅವರು ಚಿತ್ರದ ಬಗ್ಗೆ ಈ ರೀತಿ ಹೇಳುತ್ತಾರೆ ”ಗೋರ್ ಅಂದರೆ ಸಮುದಾಯ. ಬಂಜಾರ ಸಮುದಾಯದವರು ಸತ್ಯ, ನ್ಯಾಯ, ನೀತಿಗೆ ತಲೆ ಬಾಗುತ್ತಾರೆ. ಗಡ್ ಎನ್ನುವುದು ಸಾಮ್ರಾಜ್ಯ. ಬಂಜಾರ ಜನಾಂಗದ ಆಚರಣೆ, ಆಚಾರ-ವಿಚಾರ, ಲಂಬಾಣಿಗಳ ಉಡುಗೆ-ತೊಡುಗೆ, ಪೂಜಿಸುವ ವಿಧಾನ, ಮುಂತಾದ ವಿಷಯಗಳ ಕುರಿತು ಚಿತ್ರ ಮಾಡುತ್ತಿದ್ದೇವೆ. ಆಧುನಿಕತೆಯ ಭರಾಟೆಯಲ್ಲಿಈ ಸಮುದಾಯ ಏನೆಲ್ಲಾ ಪಲ್ಲಟಗಳನ್ನು ಎದುರಿಸುತ್ತಿದೆ ಎಂದು ಹೇಳುವ ಪ್ರಯತ್ನ ಈ ಚಿತ್ರದಲ್ಲಿದೆ. ಅವನತಿಗೆ ಹೋಗುತ್ತಿರುವ ಜನಾಂಗವನ್ನು ಹೇಗೆ ಮುನ್ನಲೆಗೆ ತರಬೇಕು ಎನ್ನುವ ಅಂಶಗಳನ್ನು ತೋರಿಸಲಾಗುತ್ತಿದೆ.”

ಚಿತ್ರೀಕರಣ ಸದ್ಯದಲ್ಲೇ…
ಜನವರಿ ಎರಡನೇ ವಾರದಿಂದ ಚಿತ್ರೀಕರಣ ಪ್ರಾರಂಭ ಆಗಲಿದ್ದು, ಹೂವಿನ ಹಡಗಲಿ, ದಾವಣಗೆರೆ, ಚಿತ್ರದುರ್ಗ, ಹೊಸದುರ್ಗ, ಹೊಸೂರು ಗಳಲ್ಲಿ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು, ಲಂಬಾಣಿ, ಮರಾಠಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ. ’ ಚಿತ್ರದಲ್ಲಿ ನಾಯಕ ಧನುಶ್ ಜೊತೆಗೆ ನಾಯಕಿಯಾಗಿ ತನು ಮಿಂಚಲಿದ್ದಾರೆ. ಇನ್ನುಳಿದಂತೆ ಪಾತ್ರವರ್ಗದಲ್ಲಿ ಗೀತಾಮಿಲನ್, ಭವ್ಯ ಪ್ರವೀಣ್, ವಿಜಯ್ಕುಮಾರ್, ಸೂಪರ್ ಕಮಲ್, ನಾರಾಯಣ್ ಮುಂತಾದವರು ನಟಿಸುತ್ತಿದ್ದಾರೆ. ಕುಬೇರ್ ನಾಯ್ಕ್ ಈ ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ಸಾಹಿತ್ಯ ಬರೆದು, ಸಂಗೀತವನ್ನು ಸಂಯೋಜಿಸುತ್ತಿದ್ದಾರೆ. ಧನಪಾಲ್ ಛಾಯಾಗ್ರಹಣ ಈ ಚಿತ್ರಕ್ಕಿದೆ.