- ಎದ್ದೇಳು ಮಂಜುನಾಥ 2 ತೆರೆಗೆ ಬರಲು ಸಜ್ಜು!!
- ನಿರ್ದೇಶಕ ಗುರುಪ್ರಸಾದ್ ಕೊನೇ ಸಿನಿಮಾ
ಇತ್ತೀಚೆಗಷ್ಟೇ ನಿಧನರಾದ, ಕನ್ನಡದ ಖ್ಯಾತ ನಿರ್ದೇಶಕರಾಗಿದ್ದ ಗುರುಪ್ರಸಾದ್ ಅವರ ಕೊನೇ ಕನಸಾಗಿದ್ದ ‘ಎದ್ದೇಳು ಮಂಜುನಾಥ 2’ ಬಿಡುಗಡೆಗೆ ಸಿದ್ಧವಾಗಿದೆ. ‘ಎದ್ದೇಳು ಮಂಜುನಾಥ’ ಎಂಬ ಸಿನಿಮಾ 2009ರಲ್ಲಿ ತೆರೆಕಂಡಿತ್ತು. ಇದರಲ್ಲಿ ನವರಸ ನಾಯಕ ಜಗ್ಗೇಶ್ ಅವರು ನಾಯಕರಾಗಿದ್ದರು. ಗುರುಪ್ರಸಾದ್ ಅವರ ಅಂತಿಮ ಚಿತ್ರವಾದ ‘ಎದ್ದೇಳು ಮಂಜುನಾಥ 2’ ಫೆಬ್ರುವರಿ 21ಕ್ಕೆ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಗುರುಪ್ರಸಾದ್ ಬರೆದು, ನಿರ್ದೇಶಿಸಿದ್ದ ‘ಎದ್ದೇಳು ಮಂಜುನಾಥ 2’ ಚಿತ್ರದಲ್ಲಿ ಅವರೇ ನಟಿಸಿದ್ದಾರೆ.
ಮಠ ಮತ್ತು ಎದ್ದೇಳು ಮಂಜುನಾಥದಂತಹ ಅವಿಸ್ಮರಣೀಯ ಚಿತ್ರಗಳನ್ನು ನೀಡಿದ್ದ ಗುರುಪ್ರಸಾದ್ ಅವರು 2024ರ ನವೆಂಬರ್ ತಮ್ಮ 52ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡಿದ್ದರು.

ಚಿತ್ರದ ಗಳಿಕೆಯಲ್ಲಿ ಅರ್ಧದಷ್ಟು ಗುರುಪ್ರಸಾದ್ ಮಗಳಿಗೆ!
ನಿರ್ಮಾಪಕರಾದ ಮೈಸೂರು ರಮೇಶ್ ‘ಎದ್ದೇಳು ಮಂಜುನಾಥ್-2 ಸಿನಿಮಾದಿಂದ ಬರುವ ಲಾಭದ 50ರಷ್ಟು ಭಾಗವನ್ನು ಗುರುಪ್ರಸಾದ್ ಅವರ ಮಗಳಾದ ನಗು ಶರ್ಮಾ ಭವಿಷ್ಯಕ್ಕೆ ಮೀಸಲಿಡಲಾಗುವುದು ಎಂದಿದ್ದಾರೆ. ಇನ್ನು ಚಿತ್ರದ ಕಿತ್ತೋದ ಪ್ರೇಮ ಎಂಬ ಹಾಡಿಗೆ ಗುರುಪ್ರಸಾದ್ ಸಾಹಿತ್ಯ ಬರೆದಿದ್ದು, ನವೀನ್ ಸಜ್ಜು ಧ್ವನಿಯಾಗಿದ್ದಾರೆ. ಅನೂಪ್ ಸೀಳಿನ್ ಹಾಡಿಗೆ ಟ್ಯೂನ್ ಹಾಕಿದ್ದಾರೆ.