- ಈ ವಾರದ ಬಿಗ್ ಬಾಸ್ ನಲ್ಲಿ 8 ಮಂದಿ ನಾಮಿನೇಟ್? ಯಾಕೆ ಈ ನಿರ್ಧಾರ ಮಾಡಿದ್ರು ಕ್ಯಾಪ್ಟನ್
- ವಾರದಿಂದ ವಾರಕ್ಕೆ ರೋಚಕತೆ ಪಡೆಯುತ್ತಿದೆ ಬಿಗ್ ಬಾಸ್
- 5 ನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಮನೆಯಲ್ಲಿ 8 ಮಂದಿ ನಾಮಿನೇಟ್ ಆಗಿದ್ದಾರೆ
ಪ್ರಾರಂಭದಿಂದಲೂ ಹಲವು ವಿಘ್ನಗಳು ಎದುರಾದ್ರೂ ಯಶಸ್ವಿಯಾಗಿ ನಡೀತಿದೆ ಬಿಗ್ ಬಾಸ್ ಸೀಸನ್ 12 BBK Bigboss Season 12. ಇದರ ಮಧ್ಯೆ ಸ್ಪರ್ಧಿಗಳ ಜಗಳ, ಪೈಪೋಟಿ ತೀವ್ರವಾಗಿದ್ದು, ಕ್ಷಣ ಕ್ಷಣಕ್ಕೂ ರೋಚಕತೆ ಪಡೆದುಕೊಳ್ಳುತ್ತಿದೆ. ಈ ವಾರದಲ್ಲಿ ರಘು ಕ್ಯಾಪ್ಟನ್ ಆಗಿದ್ದು, ಬಿಗ್ ಬಾಸ್ ನಾಮಿನೇಷನ್ ನ ಸಂಪೂರ್ಣ ಜವಾಬ್ದಾರಿಯನ್ನು ಕ್ಯಾಪ್ಟನ್ ಮೇಲೆ ಬಿಟ್ಟಿದ್ದರು. ಆ ರೀತಿಯಲ್ಲಿ ಕ್ಯಾಪ್ಟನ್ ರಘು ಅವರು 8 ಮಂದಿಯನ್ನು ನಾಮಿನೇಟ್ ಮಾಡಿದ್ದಾರೆ.
ಈ ವಾರದ ಟಾಸ್ಕ್ ಹೀಗಿತ್ತು
ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಈ ವಾರ ಹೊಸ ರೀತಿಯ ಟಾಸ್ಕ್ ನಡೆಸಲಾಗಿತ್ತು. ಮನೆ ‘ಕಾಲೇಜ್ ಕ್ಯಾಂಪಸ್’ ಆಗಿ ರೂಪಾಂತರಗೊಂಡಿದ್ದು, ಸ್ಪರ್ಧಿಗಳನ್ನು ನೀಲಿ ಮತ್ತು ಕೆಂಪು ಎಂಬ ಎರಡು ತಂಡಗಳಾಗಿ ವಿಭಜಿಸಲಾಯಿತು. ಬಿಗ್ ಬಾಸ್ ನೀಡಿದ್ದ ಟಾಸ್ಕ್ ಪ್ರಕಾರ, ಪ್ರತಿ ತಂಡದ ಒಬ್ಬೊಬ್ಬ ಸದಸ್ಯರು ಎದುರಾಳಿ ತಂಡದ ಸ್ಪರ್ಧಿ ಮನೆಯಲ್ಲಿ ಉಳಿಯಲು ಯೋಗ್ಯರಲ್ಲ ಎಂಬುದನ್ನು ವಾದ ಮೂಲಕ ಸಾಬೀತುಪಡಿಸಬೇಕಿತ್ತು. ಈ ಟಾಸ್ಕ್ನಲ್ಲಿ ಸರಿಯಾದ ಕಾರಣವನ್ನು ಮಂಡಿಸಿದ ಸ್ಪರ್ಧಿಯನ್ನು ಕ್ಯಾಪ್ಟನ್ ರಘು ‘ಸೇವ್’ ಮಾಡಿದರು. ವಾದಿಸಲು ವಿಫಲರಾದವರು ನೇರವಾಗಿ ನಾಮಿನೇಷನ್ಗೆ ಒಳಗಾದರು. ಹೀಗಾಗಿ ಈ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಘು ಅವರಿಗೆ ಸಂಪೂರ್ಣ ಅಧಿಕಾರವಿತ್ತು.
ಈ ವಾರ ನಾಮಿನೇಟ್ ಆಗಿರುವವರು
ಈ ವಾರ ಮನೆಯ ಹೊರಹೋಗುವ ಸಾಧ್ಯತೆ ಇರುವ ಸ್ಪರ್ಧಿಗಳು: ರಾಶಿಕಾ ಶೆಟ್ಟಿ, ರಿಷಾ ಗೌಡ, ಅಶ್ವಿನಿ ಗೌಡ, ಧ್ರುವಂತ್, ಧನುಷ್, ಗಿಲ್ಲಿ ನಟ, ಮಾಳು ನಿಪನಾಳ ಮಲ್ಲಮ್ಮ. ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ರಾಶಿಕಾ ಶೆಟ್ಟಿ ಮತ್ತು ಸ್ಪಂದನಾ ಸೋಮಣ್ಣ ಮೇಲೆ ಮಾಡಿದ ‘ಪ್ರಾಂಕ್ ಎಲಿಮಿನೇಷನ್’ ಮಾತ್ರ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ವಾರ ನಿಜವಾದ ಎಲಿಮಿನೇಷನ್ ನಡೆಯುವುದು ಖಚಿತವಾಗಿರುವಂತೆ ಕಾಣುತ್ತಿದೆ.
ಮಲ್ಲಮ್ಮ ವೈಯಕ್ತಿಕ ಕಾರಣದಿಂದ ಮನೆಯಿಂದ ಹೊರಬಂದ ಮಾಹಿತಿ
ಈ ಮಧ್ಯೆ, ಸ್ಪರ್ಧಿ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ಮಲ್ಲಮ್ಮ ಅವರ ಕುಟುಂಬದಲ್ಲಿ ಮಗು ಜನಿಸಿರುವುದರಿಂದ, ಆ ಸಂತೋಷದ ಕ್ಷಣದಲ್ಲಿ ಹಾಜರಾಗಬೇಕಾದ ಅನಿವಾರ್ಯತೆ ಕಂಡುಬಂದಿದೆ. ಇದರಿಂದಾಗಿ ಅವರು ಸ್ವಯಂಪ್ರೇರಿತವಾಗಿ ಆಟ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಬಿಗ್ ಬಾಸ್ ಅಥವಾ ಕಲರ್ಸ್ ಕನ್ನಡ ವಾಹಿನಿ ಯಾವುದೇ ಅಧಿಕೃತ ಘೋಷಣೆ ನೀಡಿಲ್ಲ. ಗುರುವಾರ (ಅ.30) ಪ್ರಸಾರವಾಗುವ ಎಪಿಸೋಡ್ನಲ್ಲಿ ಮಲ್ಲಮ್ಮ ತೊರೆದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಸಾಧ್ಯತೆ ಇದೆ.
ಪ್ರೇಕ್ಷಕರ ಕಣ್ಣು ಈಗ ನಾಮಿನೇಷನ್ ಫಲಿತಾಂಶದತ್ತ
8 ಮಂದಿ ನಾಮಿನೇಟ್ ಆಗಿರುವ ಹಿನ್ನೆಲೆಯಲ್ಲಿ, ಈ ವಾರ ಮನೆಯೊಳಗಿನ ವಾತಾವರಣ ತೀವ್ರತೆ ಪಡೆದುಕೊಂಡಿದೆ. ಯಾರು ಉಳಿಯುತ್ತಾರೆ, ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಬಿಗ್ ಬಾಸ್ ಮನೆಯಲ್ಲಿ ಮುಂದಿನ ಎಪಿಸೋಡ್ಗಳು ಮತ್ತಷ್ಟು ರೋಚಕವಾಗಲಿವೆ ಎಂಬುದು ಸ್ಪಷ್ಟ.


