- ಅಪ್ಪನ ಕೊನೆಯ ಆಸೆ ಈಡೇರಿಸಲು 101 ಜನರಿಗೆ ಕಾಶಿಯಾತ್ರೆ ಮಾಡಿಸ್ತಿದ್ದಾರೆ ಕನ್ನಡದ ಈ ನಟ
- ನಟ ಖ್ಯಾತ ದೇಹದಾರ್ಢ್ಯ ಪಟು ಜಿಮ್ ರವಿ ಇದೀಗ ಅಶಕ್ತರಿಗೆ ಕಾಶಿಯಾತ್ರೆ ಮಾಡಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
- ತಂದೆಯ ಕನಸನ್ನು ಹೀಗಾದರೂ ಈಡೇರಿಸಬೇಕು ಎನ್ನುವ ನಿರ್ಧಾರ ಈ ಕೆಲಸ ಮಾಡುವಂತೆ ಉತ್ತೇಜಿಸುತ್ತಿದೆ.
ನಟ ಖ್ಯಾತ ದೇಹದಾರ್ಢ್ಯ ಪಟು ಜಿಮ್ ರವಿ ಇದೀಗ ಅಶಕ್ತರಿಗೆ ಕಾಶಿಯಾತ್ರೆ ಮಾಡಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು. ಕೋಲಾರ ಮೂಲದ ಜಿಮ್ ರವಿ ಒಳ್ಳೆಯ ದೇಹದಾರ್ಢ್ಯ ಪಟು. ಅಲ್ಲದೇ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ದೇಶ ಹಾಗೂ ವಿದೇಶಗಳಲ್ಲೂ ಪ್ರಸಿದ್ದರಾಗಿರುವ ಜಿಮ್ ರವಿ ಇತ್ತೀಚೆಗೆ ಕನ್ನಡದ “ಪುರುಷೋತ್ತಮ”ಎನ್ನುವ ಸಿನಿಮಾದಲ್ಲಿ ನಾಯಕ ನಟನಾಗಿಯೂ ಮಿಂಚಿದ್ದರು.
ಕನಸಿನ ಹಿಂದಿನ ಕಥೆ ಹೀಗಿದೆ
ಅವರು ಸಿನಿಮಾ ಮತ್ತು ವೈಯಕ್ತಿಕ ಜೀವನದಲ್ಲಿ ಅಷ್ಟೇನೂ ಯಶಸ್ವಿಯಾಗದಿದ್ದ ದಿನಗಳವು. ಅದೇ ಸಮಯದಲ್ಲಿ ಇವರ ತಾಯಿ ಲೋಕ ಬಿಟ್ಟು ಹೋಗುತ್ತಾರೆ. ಕೆಲವೇ ದಿನಗಳಲ್ಲಿ ಅವರ ತಂದೆ, ರವಿಯವರ ಬಳಿ ಬಂದು “ಹೆಂಡತಿಯ ನಿಧನದಿಂದ ನನಗೆ ತುಂಬಾ ನೋವಾಗಿದೆ, ನನಗೆ ಕಾಶಿಯಾತ್ರೆ ಮಾಡಬೇಕಾಗಿದೆ. ನನ್ನ ಆಸೆ ಈಡೇರಿಸು” ಎಂದು ಕೋರಿಕೊಳ್ಳುತ್ತಾರೆ. ಆದರೆ ಆ ದಿನಗಳಲ್ಲಿ ರವಿ ಅವರಿಗೆ ಹಣಕಾಸಿನ ಸಮಸ್ಯೆ ಇದ್ದದ್ದರಿಂದ ಅವರು ಅದೆಲ್ಲಾ ಸಾಧ್ಯ ಇಲ್ಲ ಎಂದು ಖಡಕ್ಕಾಗಿ ನೋವಾಗುವಂತೆ ಹೇಳಿಬಿಡುತ್ತಾರೆ. ಅದಾದ ಕೆಲವು ದಿನಗಳಲ್ಲಿ ಹಣ ಹೊಂದಿಸಿ ಅಪ್ಪನಿಗೆ ಕಾಶಿಯಾತ್ರೆ ಮಾಡಿಸಲು ವ್ಯವಸ್ಥೆ ಮಾಡುತ್ತಾರೆ ವಿಮಾನದ ಟಿಕೇಟ್ ಕೂಡ ಬುಕ್ ಮಾಡುತ್ತಾರೆ. ಈ ವಿಷಯವನ್ನು ತಂದೆಯರಿಗೂ ತಿಳಿಸುತ್ತಾರೆ, ಆದರೆ ಇನ್ನೇನು ಕಾಶಿಯಾತ್ರೆ ಕೈಗೊಳ್ಳಬೇಕು ಎನ್ನುವ ಕೆಲವು ಸಮಯದ ಮೊದಲೇ ತಂದೆಯೂ ಲೋಕಬಿಟ್ಟು ಹೋಗುತ್ತಾರೆ. ಅಪ್ಪನ ಕೊನೆಯ ಆಸೆ ಈಡೇರಿಸದಿದ್ದ್ದಕ್ಕೆ ರವಿ ಅವರು ನೊಂದುಕೊಳ್ಳುತ್ತಾರೆ ಮತ್ತು ಆ ದಿನವೇ ನಿರ್ಧಾರಿಸುತ್ತಾರೆ ತಂದೆಯಂತಿರುವ ಅಶಕ್ತರಿಗೆ ಕಾಶಿಯಾತ್ರೆ ಮಾಡಿಸಬೇಕು, ತಂದೆಯ ಕನಸನ್ನು ಹೀಗಾದರೂ ಈಡೇರಿಸಬೇಕು ಎನ್ನುವ ನಿರ್ಧಾರವದು.
101 ಜನರ ತಂಡದ ಜೊತೆ ಕಾಶಿಯಾತ್ರೆ
“ಅಪ್ಪ ನಿಧನರಾಗಿ 14 ವರ್ಷಗಳಾಗಿದೆ. ನಾನು ಅಷ್ಟೂ ವರ್ಷಗಳ ಕಾಲ ಹುಂಡಿಯಲ್ಲಿ ಹಣ ಕೂಡಿಟ್ಟಿದ್ದೇನೆ. ದುಂದು ವೆಚ್ವ ಮಾಡದೇ ಹತ್ತು, ಇಪ್ಪತ್ತು ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿಗಳವರೆಗೂ ಹುಂಡಿಯಲ್ಲಿ ಹಾಕುತ್ತಿದ್ದೆ. ಈಗ ಹುಂಡಿಯ ಹಣವನ್ನು ಉಪಯೋಗಿಸುವ ಕಾಲ ಬಂದಿದೆ. ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಜಗನ್ನಾಥ್ ಹಾಗೂ ಕುಟುಂಬದವರ ಮಾರ್ಗದರ್ಶನದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಸುಮಾರು 80 ಜನ ಅಶಕ್ತರನ್ನು ನಾನು ಮುಖತಃ ಭೇಟಿ ಮಾಡಿದ್ದೇನೆ. ಒಟ್ಟು 101 ಜನರ ತಂಡ ಜುಲೈ 2ರಂದು ಕಾಶಿಯಾತ್ರೆ ಕೈಗೊಳ್ಳಲಿದೆ. ಅಷ್ಟೂ ಜನರ ಖರ್ಚು ವೆಚ್ಚಗಳನ್ನು ನಾನೇ ಭರಿಸುತ್ತೇನೆ ಎಂದು ತಮ್ಮ ಕಾಶಿಯಾತ್ರೆಯ ಯೋಜನೆಯನ್ನು ಮುಂದಿಟ್ಟಿದ್ದಾರೆ ನಟ ರವಿ ಅವರು. ಅಪ್ಪನ ಕಾಶಿಯಾತ್ರೆಯನ್ನು ಅವರ ಜೀವಿತದ ಅಧಿಯಲ್ಲಿ ನೆರವೇರಿಸಲಾಗದಿದ್ದರೂ ಇದೀಗ 101 ಜನರನ್ನು ಕಾಶಿಯಾತ್ರೆ ಮಾಡಿಸುವ ಒಂದು ಸಮಾಜಮುಖೀ ಕೆಲಸಕ್ಕೆ ನಟ ರವಿ ಅವರು ಹಾಕಿರುವ ಈ ಯೋಜನೆ ಪ್ರೇರಣದಾಯಕವಾಗಿದೆ.