- “ನೆತ್ತೆರೆಕೆರೆ” ಕೊಟ್ಟ ವಿಭಿನ್ನ ಫೀಲ್ ಗೆ ತುಳು ಪ್ರೇಕ್ಷಕರು ಫಿದಾ
- ಡಿಫರೆಂಟ್ ಕತೆಯ ತುಳು ಮಾಸ್ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ
- ಗಮನಸೆಳೆಯಿತು “ನೆತ್ತೆರೆಕೆರೆ”ಯ ಥ್ರಿಲ್ಲಿಂಗ್ ಸೀನ್, ಸಖತ್ ಆಕ್ಷನ್
ಗ್ಯಾಂಗ್ ವಾರ್ ನಡುವೆ ಸಿಕ್ಕಿ ಹಾಕಿಕೊಳ್ಳುವ ನಾಲ್ಕು ಸ್ನೇಹಿತರು, ನಾಯಕನ ತ್ಯಾಗ, ಸ್ನೇಹ, ಸೇಡಿನ ಸಖತ್ ಆಕ್ಷನ್ ಮತ್ತು ಥ್ರಿಲ್ಲಿಂಗ್ ಅಂಶಗಳನ್ನು ಹೊಂದಿರುವ “ನೆತ್ತೆರೆಕೆರೆ” Netterekere ತುಳು ಚಿತ್ರಕ್ಕೆ ಪ್ರೇಕ್ಷಕರು ಕಂಪ್ಲೀಟ್ ಫಿದಾ ಆಗಿದ್ದಾರೆ. “ನೆತ್ತೆರೆಕೆರೆ” ಟ್ರೈಲರ್ ನೋಡಿಯೇ ಸಿನಿರಸಿಕರು ಚಿತ್ರದ ಕುರಿತು ಕುತೂಹಲಕ್ಕೊಳಗಾಗಿದ್ದರು. ಇದೀಗ ಚಿತ್ರ ರಿಲೀಸ್ ಆಗಿದ್ದೇ “ನೆತ್ತೆರೆಕೆರೆ” ಕೊಟ್ಟ ಥ್ರಿಲ್ಲಿಂಗ್, ಎಮೋಷನಲ್ ಫೀಲ್ ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಮಾಸ್ ಫೀಲ್ ಗೆ ಪ್ರೇಕ್ಷಕರು ಖುಷ್
ಚಿತ್ರದಲ್ಲಿ ಒಂದಷ್ಟು ಪ್ರೀತಿ, ಅದ್ದೂರಿ ಆಕ್ಷನ್ ಮತ್ತು ಕಾಡುವಂತಹ ಭಾವನಾತ್ಮಕ ಅಂಶಗಳಿರುವುದರಿಂದ ಕಮರ್ಷಿಯಲ್ ಆಗಿಯೂ ಚಿತ್ರ ಕ್ಲಿಕ್ ಆಗಿದೆ. ಮುಖ್ಯವಾಗಿ, ತುಳು ಚಿತ್ರರಂಗದಲ್ಲಿ ಕಾಮಿಡಿ ಜಾನರ್ ನ ಸಿನಿಮಾಗಳೇ ಜಾಸ್ತಿಯಾಗಿವೆ, ಒಂದಷ್ಟು ವಿಭಿನ್ನ ಚಿತ್ರಗಳು ತುಳು ಭಾಷೆಗೆ ಬರಬೇಕು ಎನ್ನುವ ಅಭಿಪ್ರಾಯ ಬಹುತೇಕ ತುಳು ಪ್ರೇಕ್ಷಕರದಾಗಿತ್ತು. ಈಗ ಹೊಸತಾಗಿ ಬಿಡುಗಡೆಗೊಂಡ “ನೆತ್ತರೆಕೆರೆ” ಚಿತ್ರ ನೋಡಿ ತುಳು ಪ್ರೇಕ್ಷಕರು, ಇಂತದ್ದೊಂದು ವಿಭಿನ್ನ ಸಿನಿಮಾ ತುಳುವಿಗೆ ಬೇಕಿತ್ತು ಎಂದು ಖುಷಿಯಿಂದ ಹುಬ್ಬೇರಿಸಿದ್ದಾರೆ. ಹಾಗಾಗಿ ಈ ಚಿತ್ರದಿಂದ ತುಳು ಚಿತ್ರರಂಗದಲ್ಲಿ ಒಂದಷ್ಟು ಬದಲಾವಣೆಯ ಗಾಳಿ ಬೀಸಿದಂತಿದೆ. ಇದೇ ಈ ಚಿತ್ರದ ಭರ್ಜರಿ ಓಟಕ್ಕೂ ಕಾರಣವಾಗುತ್ತಿದೆ.
ಅಪ್ಪಟ ತುಳುನಾಡಿನ ಸೊಗಡಿನ ಚಿತ್ರಕಥೆ
ಸ್ವರಾಜ್ ಶೆಟ್ಟಿ Swaraj Shetty ನಿರ್ದೇಶನ ಮತ್ತು ಲಂಚುಲಾಲ್ ಕೆ.ಎಸ್. Lanchull K S ನಿರ್ಮಾಣದ ಚಿತ್ರ ಇದಾಗಿದೆ. ಚಿತ್ರದಲ್ಲಿ ಸ್ವರಾಜ್ ಶೆಟ್ಟಿ ಮತ್ತು ದಿಶಾಲಿ ಪೂಜಾರಿ Dishali Poojary ಮುಖ್ಯ ಭೂಮಿಕೆಯಲ್ಲಿದ್ದಾರೆ. ಸ್ವರಾಜ್ ಶೆಟ್ಟಿ ಅವರ ಆಕ್ಷನ್ ಮತ್ತು ಫೈಟ್ ಗಳು, ದಿಶಾಲಿ ಪೂಜಾರಿ ಅವರ ಎಮೋಷನಲ್ ಮತ್ತು ಕ್ಯಾಚಿ ನಟನೆ, ಮಾಸ್ ಆಂಗಲ್ ನಲ್ಲಿ ಹೆಣೆದಿರುವ ಅಪ್ಪಟ ತುಳುನಾಡಿನ ಸೊಗಡಿನ ಚಿತ್ರಕಥೆ, ಇವೆಲ್ಲಾ ತುಳು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿದೆ.
ಅಂದ ಹಾಗೆ ಚಿತ್ರದಲ್ಲಿ ವಿಶೇಷ ಪಾತ್ರಗಳಿಗೆ ಬಣ್ಣ ಹಚ್ಚಿದ ಬಹುಭಾಷಾ ತಾರಾ ನಟ ಸುಮನ್ ತಲ್ವಾರ್, Suman Thalwar ಲಂಚುಲಾಲ್ ಕೆ.ಎಸ್. ಯುವ ಶೆಟ್ಟಿ, ಪುಷ್ಪರಾಜ್ ಬೊಳ್ಳಾರು, ಅನಿಲ್ ಉಪ್ಪಳ, ಭವ್ಯಾ ಪೂಜಾರಿ, ಪೃಥ್ವಿನ್ ಪೊಳಲಿ, ಉತ್ಸವ್ ವಾಮಂಜೂರು, ನೀತ್ ಪೂಜಾರಿ, ವಿಜಯ ಮಯ್ಯ, ಚಂದ್ರಶೇಖರ ಸಿದ್ದಕಟ್ಟೆ, ಮನೀಶ್ ಶೆಟ್ಟಿ ಉಪಿರ, ನಮಿತ ಕಿರಣ್, ಸುನೀತಾ, ವಿನಾಯಕ್ ಜಪ್ಪು, ಭಗವಾನ್, ಕೀರ್ತನ್ ಮೂಲ್ಕಿ ಮೊದಲಾದ ಕಲಾವಿದರ ಅಭಿನಯಕ್ಕೆ ಪ್ರೇಕ್ಷಕರು ಒಳ್ಳೆಯ ಪ್ರತಿಕ್ರಿಯೆಯನ್ನೇ ನೀಡುತ್ತಿದ್ದಾರೆ.
ಛಾಯಾಗ್ರಹಣದಲ್ಲಿ ಉದಯ ಬಲ್ಲಾಲ್, ಸಂಕಲನದಲ್ಲಿ ಗಣೇಶ್ ನೀರ್ಚಾಲು, ಸಂಗೀತದಲ್ಲಿ ವಿನೋದ್ರಾಜ್ ಕೋಖಿಲ ಕೂಡ ಗಮನಸೆಳೆಯುವ ಕೆಲಸ ಮಾಡಿದ್ದಾರೆ. ಈ ಎಲ್ಲಾ ಅಂಶಗಳಿಂದ ಚಿತ್ರಕ್ಕೆ ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ.