ಯುವ ನಿರ್ದೇಶಕ ಕಿಶೋರ್ ಮೂದಬಿದ್ರೆ ಆಕ್ಷನ್ ಕಟ್ ಹೇಳಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಜಯ್ ಹಾಗೂ ಅಶ್ವಿನಿ ಚಂದ್ರಶೇಖರ್ ಜೋಡಿ ವಿಶಿಷ್ಟ ಪಾತ್ರದಲ್ಲಿ ನಟಿಸಿರುವ ರಿಪ್ಪನ್ ಸ್ವಾಮಿ ಚಿತ್ರದ ಸೆನ್ಸಾರ್ ಮಂಡಳಿಯ ಪರೀಕ್ಷೆ ಪೂರ್ಣಗೊಂಡು ಯು/ಎ ಸರ್ಟಿಫಿಕೇಟ್ ನೊಂದಿಗೆ ಪಾಸಾಗಿದ್ದು 2025 ಜನವರಿಯಲ್ಲಿ ತೆರೆಯಮೇಲೆ ಬರಲು ರೆಡಿಯಾಗಿದೆ.
ಮಲೆನಾಡ ಹುಡುಗಿ ಅಶ್ವಿನಿ ಚಂದ್ರಶೇಖರ್ ಚಿತ್ರದಲ್ಲಿ ವೈದ್ಯೆಯಾಗಿ ನಟಿಸಿದ್ದು ವಿಜಯ್ ಕೂಡಾ ವಿಭಿನ್ನವಾದ ಪಾತ್ರದಲ್ಲಿ ನಟಿಸಿದ್ದಾರೆ. ಕೇವಲ 48 ದಿನಗಳಲ್ಲಿ ಪೂರ್ಣಗೊಂಡಿರುವ, ಮಲೆನಾಡ ಹಳ್ಳಿಯಲ್ಲಿ ನಡೆಯುವ ಕತೆಯೊಂದರ ಕಥಾಹಂದರ ಹೊಂದಿರುವ ಈ ಚಿತ್ರ ಬಹುತೇಕ ಮಲೆನಾಡು ಭಾಗದಲ್ಲಿ ಚಿತ್ರೀಕರಣಗೊಂಡಿದ್ದು, ಕಳಸ, ಬಾಳೆಹೊನ್ನೂರು, ಕೊಪ್ಪದಲ್ಲಿ ಶೂಟಿಂಗ್ ಮಾಡಲಾಗಿದೆ.
ಪಂಚಾಂನನ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಈ ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುಯೆಲ್ ಅಬಿ ಸಂಗೀತ ನೀಡಿದ್ದಾರೆ. ರಂಗನಾಥ್ ಸಿಎಂ ಅವರು ಛಾಯಾಗ್ರಹಣಕ್ಕೆ, ಶಶಾಂಕ್ ನಾರಾಯಣ್ ಸಂಕಲನ ನೀಡಿದ್ದಾರೆ. ಇದರೊಂದಿಗೆ ಪೋಷಕ ಪಾತ್ರದಲ್ಲಿ ಪ್ರಕಾಶ್ ತೂಮಿನಾಡ್, ಯಮುನಾ ಶ್ರೀನಿಧಿ, ವಜ್ರಧೀರ್ ಜೈನ್, ಕೃಷ್ಣ ಮೂರ್ತಿ ಕವತಾರ್, ಮೋಹನ್ ಶೇಣಿ ಮುಂತಾದವರು ಚಿತ್ರದ ಮೆರುಗನ್ನು ಹೆಚ್ಚಿಸಿದ್ದಾರೆ.