ನಿರ್ದೇಶನಕ್ಕೂ ಜೈ, ನಟನೆಯೂ ಸೈ “ಇದು ರಿಷಬ್ ಪವರ್”
ನಿರ್ದೇಶನ ಮತ್ತು ನಟನೆ ಇವೆರಡರಲ್ಲೂ ಮಿಂಚುವ ಸ್ಟಾರ್ ಗಳು ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ, ಇವೆರಡನ್ನೂ ಬ್ಯಾಲೆನ್ಸ್ ಮಾಡುವುದು ಸಾಧ್ಯವೇ ಇಲ್ಲ ಎಂದು ಈ ಕಾಲದ ಕನ್ನಡ ಚಿತ್ರರಂಗ ಹೇಳುತ್ತಿರುವ ಹೊತ್ತಿನಲ್ಲಿ ಕನ್ನಡ ಚಿತ್ರರಂಗಕ್ಕೆ ಸುನಾಮಿಯಂತೆ ಅಪ್ಪಳಿಸಿ ಬಂದ ನಟ ರಿಷಬ್ ಶೆಟ್ಟಿ. ಕಾಂತಾರ ಸಿನಿಮಾದ ಮೂಲಕ ಮತ್ತೆ ನಿರ್ದೇಶನದಲ್ಲೂ ಗಟ್ಟಿಯಾಗಿ ಬೇರೂರಿ, ನಟನೆಯಲ್ಲಿ ತಾನೇನೂ ಕಡಿಮೆ ಇಲ್ಲ ಎನ್ನುವುದನ್ನು ಕಾಂತಾರ ಅನ್ನೋ ಕ್ಲಾಸಿಕ್ ಸಿನಿಮಾದ ಮೂಲಕ ಸಾಬೀತುಪಡಿಸಿದ ನಟ ರಿಷಬ್ ಶೆಟ್ಟಿಯವರ ಸಿನಿ ಕಹಾನಿ ಇಲ್ಲಿದೆ.
ನಟನೆಯ ಹಾದಿಯಲ್ಲಿ ಉದಯೋನ್ಮುಖ ನಟ
2012 ರಲ್ಲಿ “ತುಘಲಕ್” ಸಿನಿಮಾದ ಮೂಲಕ ಬೆಳ್ಳಿಪರದೆಯಲ್ಲಿ ಭರವಸೆ ಮೂಡಿಸಿದ ರಿಷಬ್ ಶೆಟ್ಟಿ, ಕ್ರಮೇಣ ತಮ್ಮ ಹೊಸ ಪರಿಭಾಷೆಯಲ್ಲಿ, ಫಾಸ್ಟ್ ಫಾಸ್ಟ್ ಕುಂದಾಪುರ ಕನ್ನಡದ ಶೇಡ್ ನಲ್ಲಿ ಡೈಲಾಗ್ ಡೆಲಿವರಿ ಮಾಡುತ್ತ ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆ ತರಲು ಯತ್ನಿಸಿದ್ರು. ಬಳಿಕ “ಲೂಸಿಯಾ”, ಉಳಿದವರು ಕಂಡಂತೆ ಸಿನಿಮಾದಲ್ಲಿ ತಮ್ಮ ಹೊಸ ರೂಪವನ್ನು ತೋರಿಸ್ತಾ ಪ್ರೇಕ್ಷಕರೊಳಗೆ ಅಲೆಯಂತೆ ಜಿಗಿದರು. ಆದರೆ ಇವರು ಎಲ್ಲರಂತಲ್ಲ, ಕನ್ನಡ ಸಿನಿಮಾದಲ್ಲಿ ಇವರು ಹೊಸ ಭಾಷ್ಯವನ್ನೇ ಬರೆಯುತ್ತಾರೆ ಎಂದು ಕನ್ನಡದ ಪ್ರೇಕ್ಷಕನಿಗೆ ತೀವ್ರವಾಗಿ ಅನ್ನಿಸತೊಡಗಿದ್ದು ಮಾತ್ರ “ಬೆಲ್ ಬಾಟಂ” ಅನ್ನೋ ಡಿಫರೆಂಟ್ ಫೀಲ್ ಕೊಡುವ, ಮಾಡರ್ನ್ ಗುಂಗಿನಲ್ಲೇ ಆ್ಯಂಟಿಕ್ ಟಚ್ ಕೊಟ್ಟ ಸಿನಿಮಾದ ಮೂಲಕ. ಈ ಸಿನಿಮಾ ಕನ್ನಡಕ್ಕೆ ಎಷ್ಟೊಂದು ವಿಭಿನ್ನವಾದ ದೃಷ್ಟಿಕೋನ ಕೊಟ್ಟಿತೆಂದರೆ, ಸಿನಿಮಾ ಪೋಸ್ಟರ್ ನಿಂದ ಹಿಡಿದು, ನಿರೂಪಣೆ, ಕತೆ, ಹಾಡು, ಸಂಭಾಷಣೆಗಳ ಮೂಲಕ ಕನ್ನಡ ಪ್ರೇಕ್ಷಕನನ್ನು ಸೆಳೆಯಿತು, ಕಾಡಿತು, ಸಿನಿಮಾ ಅಂದ್ರೆ ಹೀಗಿರ್ಬೆಕು ಎಂದು ಕನ್ನಡದ ಪ್ರೇಕ್ಷಕ ಹುಬ್ಬೇರಿಸಿತ್ತು ಮಾತ್ರ ಸುಳ್ಳಲ್ಲ. ಅಲ್ಲಿಂದ ರಿಷಬ್ ಶೆಟ್ಟಿ ಅವರನ್ನು ಕನ್ನಡದ ಪ್ರೇಕ್ಷಕ ಹೊಸ ರೀತಿಯಲ್ಲಿ ಸ್ವಾಗತಿಸಿತು.
ರಿಷಬ್ ಸಿನಿಮಾ ಯಾನಕ್ಕೆ ಇನ್ನೊಂದು ತಿರುವು ಕೊಟ್ಟ ಸಿನಿಮಾ “ಗರುಡ ಗಮನ ವೃಷಭವಾಹನ”. ಈ ಸಿನಿಮಾ ಒಂದು ಡಿಫರೆಂಟ್ ಆ್ಯಂಗಲ್ ನಲ್ಲಿ, ಹೊಸ ಕತೆಯ ನಿರೂಪಣೆಯಲ್ಲಿ, ಫೈಟ್, ಲೈಟಾದ ಪ್ರೇಮ, ಕ್ರೌರ್ಯ, ಸಿದ್ದಾಂತಗಳೊಂದಿಗೆ ತೆರೆಗಪ್ಪಳಿಸಿದ್ದರಿಂದ ಕನ್ನಡ ಪ್ರೇಕ್ಷಕರಿಗೂ ಇಷ್ಟವಾಯ್ತು. ಇವೆಲ್ಲಾ ರಿಷಬ್ ಶೆಟ್ಟಿಯವರ ಸಿನಿ ಲೈಫ್ ಗೆ ಹೊಸ ತಿರುವು ಕೊಟ್ಟಿತು.
ನಿರ್ದೇಶನದ ಹಾದಿಯಲ್ಲಿ ಭರ್ಜರಿ ಗೆಲುವು
ರಿಷಬ್ ನಿರ್ದೇಶಿಸಿದ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು ಮಾತ್ರ ಕನ್ನಡ ಸಿನಿಮಾ ರಂಗದ ಗೆಲುವು ಕೂಡ ಆದದ್ದು ವಿಶೇಷ. ರಿಕ್ಕಿ, ಕಿರಿಕ್ ಪಾರ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕಾಂತಾರ ಸಿನಿಮಾಗಳು ಭಾರೀ ಸದ್ದು ಮಾಡಿದವು, ಅದರಲ್ಲೂ ಕಿರಿಕ್ ಪಾರ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕಾಂತಾರ ಸಿನಿಮಾಗಳು ಹಲವಾರು ದಾಖಲೆಗಳು ಸೃಷ್ಟಿಸಿದವು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಯನ್ನೂ ಕೂಡ ಪಡೆದುಕೊಂಡದ್ದು ಕನ್ನಡಕ್ಕೆ ದೊಡ್ಡದೊಂದು ಹೆಗ್ಗಳಿಕೆ. ಅಲ್ಲದೇ ರಿಷಬ್ ಅವರ ಸಿನಿ ಕೆರಿಯರ್ ಅನ್ನು ಇನ್ನಷ್ಟು ಬೂಸ್ಟ್ ಮಾಡಿ ಅವರನ್ನು ಹೊಸತೊಂದು ಉತ್ತುಂಗಕ್ಕೆ ಈ ಸಿನಿಮಾಗಳು ಕೊಂಡೊಯ್ದವು. ಇದರಿಂದ ನಟನೆಯಲ್ಲಿ ಮಾತ್ರವಲ್ಲ, ನಿರ್ದೇಶಕನಾಗಿಯೂ ರಿಷಬ್ ಕೋಟ್ಯಾಂತರ ಕನ್ನಡಿಗರಲ್ಲಿ ಅರಳಿದರು. ಇದೀಗ ರಿಷಬ್ ನಿರ್ದೇಶನದ ಕಾಂತಾರ ಭಾಗ 2 ಸಿದ್ಧಗೊಳ್ಳುತ್ತಿದೆ. ನಿರ್ದೇಶಕನಾಗಿ, ನಟನಾಗಿ ಅಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಎನ್ನುವುದೇ ದೊಡ್ಡ ಕುತೂಹಲ.