- ಶೀಘ್ರದಲ್ಲೇ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ “ನಮೋ ವೆಂಕಟೇಶ” ತೆರೆಗೆ
- ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಸಿನಿಮಾ “ನಮೋ ವೆಂಕಟೇಶ”
- ಇಂದಿನ ಕಾಲದ ಕಥೆಯನ್ನು ಹೊಂದಿರುವ ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಸಿನಿಮಾ
ಆರುಶ್ ಪಿಕ್ಚರ್ಸ್ Aarush Pictures ಬ್ಯಾನರಿನಲ್ಲಿ ಶ್ರೀನಿವಾಸ ಗೆಜ್ಜಲಗೆರೆ Srinivasa Gejjalagere ಮೊದಲ ಬಾರಿಗೆ ನಿರ್ಮಿಸುತ್ತಿರುವ “ನಮೋ ವೆಂಕಟೇಶ” Namo Venkatesha ಸಿನಿಮಾಕ್ಕೆ ಮೈಸೂರು ಮೂಲದ ಯುವ ಪ್ರತಿಭೆ ವಿಜಯ್ ಭಾರದ್ವಾಜ್ Vijay Bharadwaj ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಲ್ಲದೇ ತೆರೆಯ ಮೇಲೆ ನಾಯಕ ನಟನಾಗಿ ಮಿಂಚಿದ್ದಾರೆ. ಈಗಾಗಲೇ ಕಿರುತೆರೆಯ ಗಟ್ಟಿಮೇಳ ಧಾರಾವಾಹಿಯ ಆಧ್ಯ ಪಾತ್ರದಲ್ಲಿ ಮಿಂಚಿರುವ ಅನ್ವಿತಾ ಸಾಗರ್ Anvitha Sagar ನಾಯಕಿಯಾಗಿ ಅಭಿನಯಿಸಿದ್ದಾರೆ. ಹೆಸರು ಕೇಳಿದರೆ ಅನ್ನಿಸುವಂತೆ ಇದೊಂದು ಪುರಾಣ ಕಥೆಯಲ್ಲ, ಬದಲಾಗಿ ನವಿರಾದ ಹಾಸ್ಯದ ಜೊತೆಗೊಂದು ಪ್ರೇಮಕಥೆಯನ್ನು ಹೊತ್ತು ರೊಮ್ಯಾಂಟಿಕ್-ಕಾಮಿಡಿ ಶೈಲಿಯಲ್ಲಿ ಬರುತ್ತಿದೆ ಈ ಸಿನಿಮಾ.
ಬೇರೆ ಪೀಳಿಗೆಗೆ ಸೇರಿದ ವ್ಯಕ್ತಿಗಳ ಸುತ್ತ ಸುತ್ತುವ ಕಥೆ
ಒಂದು ಪೀಳಿಗೆಯ ವ್ಯಕ್ತಿಗಳ ಭಿನ್ನ ಆಲೋಚನೆಗಳಿಂದ ಮತ್ತೊಂದು ಪೀಳಿಗೆಗೆ ಸೇರಿದ ವ್ಯಕ್ತಿಗಳ ಜೀವನದ ಮೇಲೆ ಬೀರುವ ಸೂಕ್ಷ್ಮ ಪ್ರಭಾವಗಳು ಅದರಿಂದ ಅವರವರ ಬದುಕು ಪಡೆದುಕೊಳ್ಳುವ ಕೈಮೀರಿದ ತಿರುವುಗಳು, ಆ ತಿರುವುಗಳಿಂದ ಕೆಲವೊಮ್ಮೆ ಸೃಷ್ಠಿಯಾಗುವ ಹೊಸ ದಾರಿಗಳು, ಆ ದಾರಿಗಳು ಆಗಾಗ್ಗೆ ಮುಚ್ಚಿಹೋದಂತಹ ಅನುಭವಗಳು, ಈ ಎಲ್ಲ ಏರಿಳಿತಗಳ ದಾಟಿ ಎಲ್ಲವು, ಎಲ್ಲರು ಬಂದು ಸೇರುವ ಗಮ್ಯಸ್ಥಾನ ಯಾವುದು? ಎಂದು ಹೇಳುವ ಹಾಸ್ಯ ಪ್ರಧಾನ ಸಾಮಾಜಿಕ ಕಥೆಯೆ “ನಮೋ ವೆಂಕಟೇಶ”
ಚಿತ್ರ ತಂಡದಲ್ಲಿ ಇದ್ದಾರೆ ಇವರೆಲ್ಲಾ…
ಶ್ಯಾಮ್ ಸುಂದರ್, ನಾಗರಾಜ ರಾವ್, ರವಿಕುಮಾರ್, ದೀಪಾ, ಮಂಜುನಾಥ್ ಹೆಗ್ಡೆ, ಸುಧಾ ಪ್ರಸನ್ನ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಶರತ್ ಆರೋಹಣ Sharath Arohana ಸಂಗೀತ ಸಂಯೋಜಿಸಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ V. Manohar ಚಿತ್ರದ ಶೀರ್ಷಿಕೆ ವಿನ್ಯಾಸದ ಜೊತೆಗೆ, ಚಿತ್ರದ ಶೀರ್ಷಿಕೆ ಹಾಡನ್ನು ಬರೆದಿದ್ದಾರೆ. ನಿರಂಜನ್ ದಾಸ್ ಮತ್ತು ವಿನೋದ್ ಲೋಕಣ್ಣನವರ್ ಛಾಯಾಗ್ರಹಣವಿದ್ದು, ಸಮೀರ್ ನಗರದ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರು, ಚಿಕ್ಕಮಗಳೂರಿನ ಬಾಳೂರು, ಕೊಟ್ಟಿಗೆಹಾರ, ದೇವರಮನೆ, ಬಣಕಲ್ ಮುಂತಾದ ಸುಂದರ ತಾಣಗಳಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಒಂದೆರಡು ತಿಂಗಳಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.