- ಸಾವಿತ್ರಿಬಾಯಿ ಫುಲೆ ಜೀವನಾಧಾರಿತ ಚಿತ್ರ “ಫುಲೆ” ಏ. 11 ಕ್ಕೆ ಬಿಡುಗಡೆ
- ಹಿರಿಯ ನಟ ಅನಂತ್ ಮಹಾದೇವನ್ ಕತೆ, ನಿರ್ದೇಶನವಿದೆ
- ಸಾವಿತ್ರಿಬಾಯಿ ಫುಲೆ ಪಾತ್ರದಲ್ಲಿ ನಟಿ ಪತ್ರಲೇಖಾ
ಇತ್ತೀಚೆಗೆ ಸಾವಿತ್ರಿಬಾಯಿ ಫುಲೆ ಅವರ 197 ಜನ್ಮವರ್ಷಾಚರಣೆಯ ಸಂದರ್ಭದಲ್ಲಿ, ಡ್ಯಾನ್ಸಿಂಗ್ ಶಿವ ಫಿಲ್ಮ್ಸ್, ಕಿಂಗ್ಸ್ ಮೆನ್ ಪ್ರೊಡಕ್ಷನ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗುತ್ತಿರುವ ಮಹಾನ್ ಸಮಾಜ ಸುಧಾರಕಿ ಸಾವಿತ್ರಿ ಬಾಯಿ ಫುಲೆ ಅವರ ಜೀವನಾಧಾರಿತ ಚಿತ್ರ “ಫುಲೆ” Phule Movie ಬಿಡುಗಡೆ ದಿನಾಂಕ ಹೊರಬಿದ್ದಿದೆ. ನಾಯಕ ನಟನಾಗಿ ಜ್ಯೋತಿರಾವ್ ಫುಲೆ ಪಾತ್ರದಲ್ಲಿ ಪ್ರತೀಕ್ ಗಾಂಧಿ ಹಾಗೂ, ನಾಯಕಿಯಾಗಿ ಸಾವಿತ್ರಿ ಬಾಯಿ ಪಾತ್ರವನ್ನು ನಟಿ ಪತ್ರಲೇಖ ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಮಹತ್ವದ ಪಾತ್ರ
ಶಿಕ್ಷಣತಜ್ಞೆ ಸಾವಿತ್ರಿಬಾಯಿ ಫುಲೆ ಅವರ ಜೀವನದ ಹಲವು ಮಹತ್ತರ ಘಟ್ಟಗಳನ್ನು ತೆರೆದಿಡುವ ಈ ಚಿತ್ರ ಇಂದಿನ ಜನತೆಗೆ ಸ್ಫೂರ್ತಿದಾಯಕವಾಗಲಿದೆ. ಈ ಚಿತ್ರದ ಮೂಲಕ ಫುಲೆ ದಂಪತಿಗಳು ಜಾತಿ ಪದ್ಧತಿ ನಿರ್ಮೂಲನೆಗೆ ಹಾಗೂ ಲಿಂಗ ತಾರತಮ್ಯದ ವಿರುದ್ಧ ನಡೆಸಿದ ಹೋರಾಟದ ಹಾದಿಯಲ್ಲಿ ಎಷ್ಟೆಲ್ಲಾ ಕಷ್ಟ ಅನುಭವಿಸಿದರು, ಕಲ್ಲು ಮುಳ್ಳುಗಳ ಹಾದಿಯನ್ನು ಹೇಗೆ ಯಶಸ್ವಿಯಾಗಿ ಕ್ರಮಿಸಿದರು ಎಂಬುದನ್ನು ಕಟ್ಟಿಕೊಡುತ್ತದೆ. 1848ರಲ್ಲಿ ಪುಣೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಮೊದಲ ಶಾಲೆಯನ್ನು ಪ್ರಾರಂಭಿಸುವಲ್ಲಿಂದ ಹಿಡಿದು ಬ್ರಿಟಿಷರ ಆಳ್ವಿಕೆಯ ನಡುವೆಯೂ ಶಿಕ್ಷಣಕ್ಕೆ ಉತ್ತೇಜನ ಕೊಡುವಲ್ಲಿಯವರೆಗೂ ಅವರು ತೆಗೆದುಕೊಂಡ ಧೈರ್ಯ, ಸ್ಫೂರ್ತಿಯ ಕತೆಯನ್ನು ಈ ಚಿತ್ರ ಹೇಳುತ್ತದೆ. ಈ ಚಿತ್ರ ಏಪ್ರಿಲ್ 11ಕ್ಕೆ ತೆರೆಗೆ ಬರಲಿದೆ.