- ಮಕ್ಕಳ ಮನಸ್ಸಿಗೆ ಖುಷಿ ಕೊಡಲು ತಯಾರಾಗಿದೆ “ಸೀಸ್ ಕಡ್ಡಿ”
- ವಿಶಿಷ್ಟ ಕಥಾಹಂದರದ ಮಕ್ಕಳ ಸಿನಿಮಾ “ಸೀಸ್ ಕಡ್ಡಿ” ಸದ್ಯದಲ್ಲೇ ತೆರೆಗೆ
- ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಸದ್ದು ಮಾಡಿದ ರತನ್ ಗಂಗಾಧರ್ ನಿರ್ದೇಶನದ ಸಿನಿಮಾ
ಪರೀಕ್ಷೆಗಳೆಲ್ಲಾ ಮುಗಿದು ಮಕ್ಕಳಿಗೆ ಬೇಸಗೆ ರಜೆಯ ಸಂಭ್ರಮ ಪ್ರಾರಂಭ ಆಗ್ತಿರೋ ಈ ಕಾಲದಲ್ಲೇ ಮಕ್ಕಳಿಗೆ, ಪೋಷಕರಿಗೆ ಖುಷಿ ನೀಡುವ ಸುದ್ದಿ ಒಂದು ಸಿಕ್ಕಿದೆ. ವಿಶಿಷ್ಟ ಕಥಾ ಹಂದರ ಹೊಂದಿರುವ ಮಕ್ಕಳಿಗೆಂದೇ ತಯಾರಾದ ಮಕ್ಕಳ ಸಿನಿಮಾ “ಸೀಸ್ ಕಡ್ಡಿ” Sees Kaddi ಸದ್ಯದಲ್ಲೇ ತೆರೆಗೆ ಬರಲಿದೆ. ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ತೆರೆಕಂಡು ಮೆಚ್ಚುಗೆಗೆ ಪಾತ್ರಾಗಿರುವ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ರತನ್ ಗಂಗಾಧರ್ Rathan Gangadhar. ಇವರಿಗೆ ಸಾಥ್ ನೀಡಿ ಚಿತ್ರ ನಿರ್ಮಾಣ ಮಾಡಿದ್ದಾರೆ ಸಂಪತ್ ಶಿವಶಂಕರ್ Sampath Shivashankar, ಕೃತಿ ನಾಣಯ್ಯ Kithi Nanayya.
ಮಕ್ಕಳಿಗೆ ಮಜ ನೀಡತ್ತೆ ಸೀಸ್ ಕಡ್ಡಿ
ಹರಿಕಥೆಯಲ್ಲಿ ಪ್ರಾವಿಣ್ಯ ಹೊಂದಿರೋ ಸೆಕ್ಯೂರಿಟಿ ಗಾರ್ಡ್ ಮತ್ತು ಕಾಂದಂಬರಿಕಾರನೋರ್ವನ ಮುಖಾಮುಖಿಯಾಗುತ್ತೆ. ಹಾಗೆ ಸಿಕ್ಕ ಸೆಕ್ಯೂರಿಟಿ ಗಾರ್ಡ್ ಅನ್ನೇ ಬೇತಾಳನಾಗಿ ಕಲ್ಪಿಸಿಕೊಂಡು ಆ ಕಾದಂಬರಿಕಾರ ಕಥೆಯೊಂದನ್ನು ಬರೆಯಲಾರಂಭಿಸುತ್ತಾನೆ. ಆ ಬೇತಾಳನ ಪ್ರಶ್ನೆಗಳಿಗೆ ವಿಕ್ರಮಾದಿತ್ಯನ ಪಾತ್ರ ಕೊಡುವ ಉತ್ತರಗಳ ಮೂಲಕ ಕಥೆ ಸಾಗ್ತಾ ಹೋಗತ್ತೆ. ಸೀಸ್ ಕಡ್ಡಿ ಅಂದ್ರೆ ಪೆನ್ಸಿಲ್ ಅನ್ನು ರೂಪಕವಾಗಿಟ್ಟುಕೊಂಡು, ಅದರ ಭಾಗವಾಗಿರೋ ಲೆಡ್, ಶಾರ್ಪ್ನರ್, ಇರೇಜರ್ ಮುಂತಾದವುಗಳನ್ನು ಹೋಲುವ ಪಾತ್ರಗಳ ಮೂಲಕ ಈ ಸಿನಿಮಾ ಕಥೆ ಮೈಕೈ ತುಂಬಿಕೊಂಡಿದೆಯಂತೆ. ಒಂದು ಪೆನ್ಸಿಲ್ ನ ರೂಪಕದೊಂದಿಗೆ ಬದುಕಿನ ಅಚ್ಚರಿದಾಯಕ ಮಜಲುಗಳನ್ನು ತೆರೆದಿಡುತ್ತಂತೆ ಈ ಸಿನಿಮಾ. ಒಂದಿಡೀ ಸಿನಿಮಾ ಲೈವ್ ಸೌಂಡ್ ರೆಕಾರ್ಡಿಂಗ್ ಮೂಲಕ ಮೂಡಿ ಬಂದಿರೋದು ಇದರ ಸ್ಪೆಷಾಲಿಟಿ.
ಆಕರ್ಷ ಕಮಲ, ಅಕ್ಷರ ಭಾರದ್ವಾಜ್, ಶರತ್ ಕೆ ಪರ್ವತವಾಣಿ, ಜಯಂತ್ ವೆಂಕಟ್ ಹಾಗೂ ಮಹೇಂದ್ರ ಗೌಡ ಇವರುಗಳು ಚಿತ್ರದ ಒಂದೊಂದು ಭಾಗದ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ವಹಿಸಿದ್ದು, ಬಹು ಪ್ರತಿಭೆಗಳು ಈ ಸಿನಿಮಾ ಮೂಲಕ ಹೊರಹೊಮ್ಮಿದೆ. ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನ, ಮಹೇಶ್ ಎನ್.ಸಿ, ಪ್ರತಾಪ್ ವಿ ಭಟ್, ಮಹೇಂದ್ರ ಗೌಡ ಅನುಜಯ ಎಸ್. ಕುಮ್ಟಕರ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಇದೇ ಮೇ ಕೊನೆಯಲ್ಲಿ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಮಕ್ಕಳು ಜೊತೆಯಲ್ಲಿ ಪೋಷಕರು ನೋಡಲೇಬೇಕಾದ ಚಿತ್ರವಾಗಿರಲಿದೆ.