- ಕಾಂತಾರ ಚಾಪ್ಟರ್-1 ಶೂಟಿಂಗ್ ವೇಳೆ ರಿಷಬ್ ಸ್ಥಿತಿ ಹೇಗಾಗಿತ್ತು?
- ಕೊನೆಗೂ ಶೂಟಿಂಗ್ ಕ್ಷಣ ಸಣ್ಣ ದರ್ಶನ ಮಾಡಿಸಿದ ರಿಷಬ್
- ಊದಿಕೊಂಡ ಕಾಲು ಮತ್ತು ಸುಸ್ತಾದ ದೇಹದ ಫೋಟೋಸ್ ಹಂಚಿಕೊಂಡಿದ್ದಾರೆ ರಿಷಬ್
ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ Devine Star Rishab Shetty ನಿರ್ದೇಶನ ಹಾಗೂ ಅಭಿನಯದ “ಕಾಂತಾರ: ಚಾಪ್ಟರ್-1” Kanthara Chapter 1 ಚಿತ್ರವನ್ನು ಈಗಾಗಲೇ ಪ್ರೇಕ್ಷಕರು ಗೆಲುವಿನ ದಡಕ್ಕೆ ಮುಟ್ಟಿಸಿದ್ದಾರೆ. ಚಿತ್ರದಲ್ಲಿನ ಸಾಹಸಮಯ ದೃಶ್ಯಗಳು, ಅಬ್ಬರದ ಕ್ಲೈಮ್ಯಾಕ್ಸ್ ಹಾಗೂ ಅದ್ಭುತ ದೃಶ್ಯ ವೈಭವ ಇವೆಲ್ಲವೂ ತೆರೆಯ ಮೇಲೆ ಪ್ರೇಕ್ಷಕರನ್ನು ಮೋಡಿ ಮಾಡುತ್ತಿವೆ. ಆದರೆ, ಸಿನಿಮಾದ ಶೂಟಿಂಗ್ ಕ್ಷಣಗಳ ಹಿಂದೆ ನಡೆದ ಹೋರಾಟ ಮತ್ತು ಶ್ರಮದ ಕಥೆ ಅನೇಕರಿಗೆ ಗೊತ್ತಿಲ್ಲ. ಆ ಶ್ರಮ ಹೇಗಿತ್ತು ಎನ್ನುವುದನ್ನು ರಿಷಬ್, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅವರು ಹಂಚಿಕೊಂಡಿದ್ದ ಫೋಟೋ ಮತ್ತು ಪೋಸ್ಟ್ ಈಗ ಸಖತ್ ವೈರಲ್ಲಾಗಿದ್ದು ರಿಷಬ್ ಫ್ಯಾನ್ಸ್ ಹುಬ್ಬೇರಿಸಿದ್ದಾರೆ.
ಊದಿಕೊಂಡ ಕಾಲು ಮತ್ತು ಸುಸ್ತಾದ ದೇಹ
ರಿಷಬ್ ಶೆಟ್ಟಿ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಊದಿಕೊಂಡ ಕಾಲು, ನಿತ್ರಾಣವಾದ ದೇಹ ಮತ್ತು ಸುಸ್ತಾದ ಮುಖದೊಂದಿಗೆ ಅವರು ಬಿದ್ದಿರುವ ದೃಶ್ಯಗಳಿವೆ. ಈ ದೃಶ್ಯದ ಸಿನಿಮಾದ ಸಾಹಸಮಯ ಶೂಟಿಂಗ್ ಗೆ ನಿದರ್ಶನದಂತಿದೆ. ಈ ದೃಶ್ಯವನ್ನು ಹಂಚಿಕೊಳ್ಳುತ್ತ “ಇವತ್ತು ಕೋಟ್ಯಂತರ ಜನ ಮೆಚ್ಚುವ ದೃಶ್ಯಗಳು ತೆರೆ ಮೇಲೆ ಮೂಡಿದರೆ, ಅದರ ಹಿಂದೆ ನಾವು ಪಟ್ಟ ಶ್ರಮ ಹಾಗೂ ನಾವು ನಂಬಿರುವ ಶಕ್ತಿಗಳ ಆಶೀರ್ವಾದ ಇದೆ” ಎಂದು ಬರೆದದ್ದೂ ವೈರಲ್ಲಾಗಿದೆ. ಮೂರು ವರ್ಷಗಳಿಂದ ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ನಡೆದಿತ್ತು.ಕುಂದಾಪುರದ ಕೆರಾಡಿಯಲ್ಲೇ ಬಹುತೇಕ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಆದರೆ ಸಿನಿಮಾ ರಿಲೀಸ್ ಆದ ಮೇಲೆ ಶೂಟಿಂಗ್ ಹೇಗೆ ನಡೆದಿರಬಹುದು? ರಿಷಬ್ ಎಷ್ಟೊಂದೆಲ್ಲ ಕಷ್ಟ ಪಟ್ಟಿರಬಹುದು ಎನ್ನುವುದನ್ನು ಬಹುತೇಕರು ಮಾತಾಡುತ್ತಿದ್ದರು. ಇದೀಗ ರಿಷಬ್, ತಾನು ಶೂಟಿಂಗ್ ವೇಳೆ ಕಷ್ಟಪಟ್ಟಿದ್ದರ ಕುರಿತು ಸಾಕ್ಷ್ಯ ನೀಡುವ ಪೋಸ್ಟ್ ಹಾಕಿದ್ದು ಅಭಿಮಾನಿಗಳ ಕುತೂಹಲ ಸ್ವಲ್ಪ ತಣಿದಂತಿದೆ.


