- ಭಾರತೀಯ ಚಿತ್ರರಂಗದ ಧೃವತಾರೆ ಶ್ಯಾಮ ಬೆನಗಲ್
- 90 ರ ಹರೆಯದ ನಿರ್ದೇಶಕ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ
- 1976 ರಲ್ಲಿ ಪದ್ಮಶ್ರೀ, 1991 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು.
- ಇವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಗಮನಾರ್ಹ
ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್ ನಿರ್ದೇಶಕ ಶ್ಯಾಮ್ ಬೆನಗಲ್ Shyam Benegal ಡ.23 ರ ಸಂಜೆ 6.38 ಕ್ಕೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಪತ್ನಿ ನೀರಾ ಮತ್ತು ಮಗಳು ಪಿಯಾ ಬೆನಗಲ್ ಅವರನ್ನು ಅಗಲಿದ್ದಾರೆ. ಕನ್ನಡಿಗರ ನೆಚ್ಚಿನ ನಟ ಅನಂತನಾಗ್ ಅವರನ್ನು 1974 ರಲ್ಲಿ ಅಂಕುರ್ ಸಿನಿಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಕರೆತಂದ ಕೀರ್ತಿ ಇವರಿಗೆ ಸಲ್ಲುತ್ತದೆ.

ಭಾರತೀಯ ಚಿತ್ರರಂಗಕ್ಕೆ ಗಮನಾರ್ಹ ಕೊಡುಗೆ
ಶ್ಯಾಮ್ ಬೆನಗಲ್ Shyam Benegal ಅವರು ಅಂಕುರ್ (1973), ನಿಶಾಂತ್ (1975), ಮಂಥನ್ (1976), ಭೂಮಿಕಾ (1977), ಮಮ್ಮೋ (1994), ಸರ್ದಾರಿ ಬೇಗಂ (1996), ಜುಬೇದಾ (2001) ಸೇರಿದಂತೆ ಹಲವು ಶ್ರೇಷ್ಠ, ಕಲಾತ್ಮಕ ಚಲನಚಿತ್ರಗಳನ್ನು ಭಾರತೀಯ ಸಿನಿಪ್ರಿಯರಿಗೆ ಉತ್ತಮ ಕೊಡುಗೆಯಾಗಿ ನೀಡಿದ್ದಾರೆ. ಇವರ ಚಲನಚಿತ್ರ ಕ್ಷೇತ್ರದ ಪ್ರತಿಭೆಯನ್ನು ಗುರುತಿಸಿ ಭಾರತ ಸರ್ಕಾರ 1976 ರಲ್ಲಿ ಪದ್ಮಶ್ರೀ ಹಾಗೂ 1991 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕರ್ನಾಟಕದವರೆನ್ನುವ ಹೆಮ್ಮೆ
ಶ್ಯಾಮ ಬೆನಗಲ್ Shyam Benegal ಅವರು ಮೂಲತಃ ಕರ್ನಾಟಕದವರಾಗಿದ್ದು 1934 ಡಿಸೆಂಬರ್ 14 ರಂದು ಹೈದರಾಬಾದ್ ನಲ್ಲಿ ಜನಿಸಿದರು. ತಂದೆ ಉಡುಗೊರೆ ನೀಡಿದ ಕ್ಯಾಮೆರಾದಲ್ಲಿ ತನ್ನ ಹನ್ನೆರಡನೇ ವಯಸ್ಸಿಗೇ ತಮ್ಮ ಮೊದಲ ಚಲನಚಿತ್ರ ರೂಪಿಸುವುದರ ಮೂಲಕ ಈ ಕ್ಷೇತ್ರದಲ್ಲಿ ತಮಗಿರುವ ಆಸಕ್ತಿಯನ್ನು ತೋರ್ಪಡಿಸಿದ್ದರು. ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ನಂತರ ಕಾಪಿರೈಟರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. 1962ರಲ್ಲಿ ಗುಜರಾತಿ ಭಾಷೆಯಲ್ಲಿ ತಮ್ಮ ಮೊದಲ ಸಾಕ್ಷ್ಯಚಿತ್ರ ‘ಘೇರ್ ಬೇತಾ ಗಂಗಾ’ ನಿರ್ಮಿಸಿದರು. 1980 ರಿಂದ 1986 ರವರೆಗೆ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (NFDC) ನಿರ್ದೇಶಕರಾಗಿ ಕೂಡಾ ಕರ್ತವ್ಯ ನಿರ್ವಹಿಸಿದ್ದಾರೆ.