- ಮುದ್ದಾದ “ಪಪ್ಪಿ” ಮೇ 1 ರಂದು ಬೆಳ್ಳಿತೆರೆಗೆ
- ಧೃವ ಸರ್ಜಾ ಅರ್ಪಿಸುತ್ತಿರುವ ಆಯುಷ್ ಮಲ್ಲಿ ನಿರ್ದೇಶನದ ಚಿತ್ರ
- ಬಾಲನಟರಾದ ಜಗದೀಶ್ ಮತ್ತು ಆದಿತ್ಯ ಜೊತೆ ತೆರೆಯ ಮೇಲೆ ರಂಜಿಸಲಿದೆ ಮುದ್ದಾದ ಪಪ್ಪಿ
ಬಿ.ಬಿ.ಸಂಕನೂರು B B Sankanuru ಬ್ಯಾನರ್ ಅಡಿಯಲ್ಲಿ ಆನಂದಪ್ಪ ಸಂಕನೂರು Anandappa Sankanuru ನಿರ್ಮಿಸುತ್ತಿರುವ, ಧೃವ ಸರ್ಜಾ Dhruva Sarja ಅರ್ಪಿಸುತ್ತಿರುವ ಹಾಸ್ಯಮಯ ಭಾವನಾತ್ಮಕ ಚಿತ್ರ “ಪಪ್ಪಿ” Puppy ಟ್ರೇಲರ್ ಬಿಡುಗಡೆಗೊಂಡು ಸಕ್ಕತ್ ವ್ಯೂಸ್ ಪಡೆದಿತ್ತು. ಇದೀಗ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಮೇ 1 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಯೇರಲಿದೆ “ಪಪ್ಪಿ”. ಆಯುಷ್ ಮಲ್ಲಿ Ayush Malli ಆಕ್ಷನ್ ಕಟ್ ಹೇಳಿರೋ ಈ ಚಿತ್ರದಲ್ಲಿ ಬಾಲನಟರಾಗಿ ಬಣ್ಣ ಹಚ್ಚಿದ್ದಾರೆ ಜಗದೀಶ್ ಕೊಪ್ಪಳ ಮತ್ತು ಆದಿತ್ಯ ಸಿಂಧನೂರು. ಬಹಳ ಮುಗ್ಧರಾಗಿ, ನೈಜತೆ, ಸಹಜತೆಯಿಂದ ಪಾತ್ರಕ್ಕೆ ಮೆರುಗು ತಂದಿದ್ದಾರೆ ಈ ಹುಡುಗರು.
ಜವಾರಿ ಮಂದಿಯ ಬದುಕು-ಬವಣೆಯ ಕಥೆ
ಇದೊಂದು ಹಾಸ್ಯಮಯ, ಭಾವನಾತ್ಮಕ, ಶುದ್ಧ ಪ್ರೀತಿ ತೋರಿಸುವ ಚಿತ್ರವಾಗಿದ್ದು ಜನರ ಮನಸ್ಸಿಗೆ ಬಹಳ ಹತ್ತಿರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಶ್ರೀಮಂತನ ನಾಯಿ ಹಾಗೂ ಬಡವನ ಪ್ರೀತಿ ಈ ಚಿತ್ರದ ಮುಖ್ಯ ಅಂಶವಾಗಿದ್ದು, ಜೊತೆಗೆ ಉತ್ತರ ಕರ್ನಾಟಕದ ಜವಾರಿ ಮಂದಿಯ ಬದುಕು-ಬವಣೆ, ನೋವು-ನಲಿವುಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಚಿತ್ರದಲ್ಲಿ ಬರುವ ಪಪ್ಪಿ ಮುದ್ದಾಗಿದ್ದು, ಪ್ರಾಣಿ ಪ್ರಿಯರನ್ನಂತೂ ಖಂಡಿತಾ ಕಾಡುತ್ತದೆ.
ಚಿತ್ರದಲ್ಲಿ ಅದೃಷ್ಟ್ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಲಿ, ರೇಣುಕ, ಆರವ್ ಲೋಹಿತ್ ನಾಗರಾಜ್ ಮುಂತಾದವರು ಪಾತ್ರನಿರ್ವಹಿಸಿದ್ದು, ಚಿತ್ರ ಬಿಡುಗಡೆಗೆ ಸಿನಿಪ್ರಿಯರು ಕಾತುರರಾಗಿದ್ದಾರೆ. ಚಿತ್ರಕ್ಕೆ ಶ್ರೀಧರ್ ಕಶ್ಯಪ್, Shridhar Kashyap ರವಿ ಬಿಲ್ಲೂರ್ Ravi Billur ಸಂಗೀತ ಸಂಯೋಜಿಸಿದ್ದಾರೆ. ಬಿ.ಸುರೇಶ್ ಬಾಬು ಛಾಯಾಗ್ರಹಣ ಮಾಡಿದ್ದು, ವಿಶ್ವ ಎನ್.ಎಮ್. ಸಂಕಲನಕ್ಕೆ ಕೈಜೋಡಿಸಿದ್ದಾರೆ.


