ಇಂದು ನಡೆಯುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಚಂದನವನದ ತಾರೆಯರು ತಮ್ಮ ಮತ ಚಲಾಯಿಸಿದ್ದು, ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾದ ಕುಶಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಹಾಗೆ ತಮ್ಮ ಅಭಿಮಾನಿಗಳಿಗೆ ಅಮೂಲ್ಯವಾದ ಈ ಮತದ ಹಕ್ಕನ್ನು ಚಲಾಯಿಸುವಂತೆ ಕೋರಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಮತ ಚಲಾಯಿಸಿ ” ಮತದಾನ ನಮ್ಮ ಭವಿಷ್ಯ ಕಾಪಾಡುತ್ತೆ. ಇಡೀ ದೇಶದ ಭವಿಷ್ಯ ನಮ್ಮೆಲ್ಲರ ಭವಿಷ್ಯ ವೋಟಿಂಗ್‌ನಲ್ಲೆ ಇದೆ. ಈ ಸಲ 70 ಪರ್ಸೆಂಟ್ ವೋಟ್ ಆಗುತ್ತೆ ನೋಡಿ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ವೋಟ್ ಹಾಕದೆ ಆಮೇಲೆ ಸರ್ಕಾರವನ್ನು ಶಪಿಸುವುದು ಅಲ್ಲ.” ಎಂದು ಹೇಳಿದರು.
ಸದಾಶಿವನಗರದಲ್ಲಿ ದೊಡ್ಮನೆ ಕುಟುಂಬ ಸದಸ್ಯರಾದ ರಾಘಣ್ಣ, ಪತ್ನಿ ಮಂಗಳ, ಯುವರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೂತ್‌ಗೆ ತೆರಳಿ ಮತವನ್ನು ಚಲಾಯಿಸಿದ್ದಾರೆ. ಈ ವೇಳೆ ಅಪ್ಪು ಇಲ್ಲದೆ ಮತದಾನ ಮಾಡಿದ್ದು ನೋವಿದೆ ಎಂದು ರಾಘಣ್ಣ ಹೇಳಿದ್ದಾರೆ.
“ಅಪ್ಪು ಇಲ್ಲದೆ ಮತದಾನ ಮಾಡಿದ್ದು ತುಂಬಾ ನೋವಿದೆ.
ಅಪ್ಪ, ಅಮ್ಮ ಜೊತೆ ವೋಟ್ ಮಾಡೋಕೆ ಬರ್ತಿದ್ವಿ. ಆಮೇಲೆ ಶಿವಣ್ಣ, ನಾನು, ಅಪ್ಪು ಬರ್ತಿದ್ವಿ. ಈಗ ಅಪ್ಪು ಇಲ್ಲದೇ ಬಂದಿದ್ದೀವಿ. ಬೇಜಾರಿದೆ.. ಮತದಾನ ಎಲ್ಲರ ಹಕ್ಕು. ನಾನು ನನ್ನ ಹಕ್ಕು ಚಲಾಯಿಸಿದ್ದೇನೆ.” ಎಲ್ಲರೂ ವೋಟ್ ಮಾಡಿ ಎಂದು ರಾಘಣ್ಣ ಹೇಳಿದ್ದಾರೆ.