- ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂವೇದನಾತ್ಮಕ ಚಿತ್ರ “ತಿಮ್ಮನ ಮೊಟ್ಟೆಗಳು” ಜೂನ್ 27 ರಂದು ತೆರೆಗೆ
- ಪಶ್ಚಿಮಘಟ್ಟದ ಅಪರೂಪದ ಕಾಳಿಂಗ ಸರ್ಪದ ಕುರಿತ ಕತೆಯನ್ನೊಳಗೊಂಡ ಚಿತ್ರ
- ಕೆಲವು ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡು ಕ್ಲಾಸ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ ಸಿನಿಮಾ
ಪಶ್ಚಿಮಘಟ್ಟದ ಅಪರೂಪದ ಕಾಳಿಂಗಸರ್ಪದ ಕುರಿತ ಕತೆಯನ್ನೊಳಗೊಂಡ, ಪ್ರಕೃತಿ ಮತ್ತು ಮನುಷ್ಯರ ನಡುವಿನ ಅನ್ಯೋನ್ಯತೆಯನ್ನು ತಿಳಿಹೇಳುವ ಕತೆಯೊಂದು ಸಿನಿಮಾವಾಗಿದೆ. ಈ ಸಿನಿಮಾದ ಹೆಸರೇ “ತಿಮ್ಮನ ಮೊಟ್ಟೆಗಳು” Thimmana Mottegalu. ಈಗಾಗಲೇ ಕೆಲವು ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡು ಕ್ಲಾಸ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಈ ಸಿನಿಮಾ ರಕ್ಷಿತ್ ತೀರ್ಥಹಳ್ಳಿ Rakshith Thirthahalli ಅವರ ನಿರ್ದೇಶನದಿಂದ ಮೂಡಿಬಂದಿದೆ. ಈ ಸಿನಿಮಾಗೆ ರಕ್ಷಿತ್ ಅವರೇ ಕತೆ, ಚಿತ್ರಕತೆ ಹೆಣೆದಿದ್ದು ಅವರ “ಕಾಡಿನ ನೆಂಟರು” Kadina Nentaru ಕಥಾಸಂಕಲನದಿಂದ ಈ ಸಿನಿಮಾದ ಕತೆಯನ್ನು ಆಯ್ದುಕೊಳ್ಳಲಾಗಿದೆ. ಶ್ರೀ ಕೃಷ್ಣ ಪ್ರೊಡಕ್ಷನ್ಸ್ Sri Krishna Prodaction ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಆದರ್ಶ್ ಅಯ್ಯಂಗಾರ್ Adarsh Iyengar ಅವರ ಚೊಚ್ಚಲ ನಿರ್ಮಾಣದ ಸಿನಿಮಾವಿದು. ಇದೇ ಜೂನ್ 27 ರಂದು ಈ ಸಿನಿಮಾ ತೆರೆಕಾಣಲಿದೆ.
ಚಿತ್ರದಲ್ಲಿದೆ ಪ್ರತಿಭಾನ್ವಿತರ ತಂಡ
ಚಿತ್ರದಲ್ಲಿ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ, ಪೃಥ್ವಿರಾಜ್ ಕೊಪ್ಪ, ಪ್ರಾಣೇಶ್ ಕೂಳೆಗದ್ದೆ ಮೊದಲಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಕೆಂಪರಾಜು ಬಿ.ಎಸ್. ಅವರ ಸಂಕಲನ ಹಾಗೂ ಹೇಮಂತ್ ಜೋಯಿಷ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಮತ್ತು ಮನ್ನಣೆಯನ್ನೂ ಕೂಡ ಈ ಚಿತ್ರ ಗಳಿಸಿರುವುದರಿಂದ ಸಹಜವಾಗಿಯೇ ಸಿನಿಮಾದ ಕುರಿತ ನಿರೀಕ್ಷೆ ಜಾಸ್ತಿಯಾಗಿದೆ.