- ಪ್ರಾರಂಭವಾಗಿ ಒಂದು ವಾರ ಕಳೆದಿದೆಯಷ್ಟೇ… ಸದ್ಯದಲ್ಲೇ ರದ್ದಾಗಲಿದೆಯೇ ಬಿಗ್ ಬಾಸ್?
- ಸರ್ಕಾರದಿಂದ ಬಿಗ್ ಬಾಸ್ ಮನೆ ಮೇಲೆ ಬಂದಿದೆ ನೋಟೀಸ್
- ಬಿಡದಿ ಬಳಿಯಿರುವ ಸ್ಟುಡಿಯೋದಲ್ಲಿ ನಡೆಯುತ್ತಿದೆ ಬಿಗ್ ಬಾಸ್ ಶೂಟಿಂಗ್
ಪ್ರತಿಷ್ಠಿತ ಕಲರ್ಸ್ ಕನ್ನಡ Colors Kannada ವಾಹಿನಿಯ ಫೇಮಸ್ ರಿಯಾಲಿಟಿ ಷೋ “ಬಿಗ್ ಬಾಸ್” Bigboss. ಒಂದು ವಾರದ ಹಿಂದಷ್ಟೇ ಕನ್ನಡದ ಸೀಸನ್ 12 ಪ್ರಾರಂಭವಾಗಿದ್ದು, ನೋಡುಗರನ್ನು ಗಮನಸೆಳೆಯುತ್ತಿದೆ. ಈ ಬಾರಿಯ ಶೂಟಿಂಗ್ ಸೆಟ್ ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿದೆ. “ವೆಲ್ಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್ಟೇನ್ಮೆಂಟ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ”ಯ ಸ್ಟುಡಿಯೋದಲ್ಲಿ ಶೂಟಿಂಗ್ ನಡೀತಿದೆ. ಆದರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೋಮವಾರ (ಅ.6) ರಂದು ಈ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
ನೋಟೀಸ್ ನೀಡಲು ಕಾರಣವೇನು?
ಹಲವು ಮೂಲಗಳ ಪ್ರಕಾರ ನಿಯಮ ಉಲ್ಲಂಘಿಸಿ ಕೊಳಚೆ ನೀರನ್ನು ಸಂಸ್ಕರಿಸದೇ ಹಾಗೇ ಹೊರಗೆ ಬಿಡುತ್ತಿರುವುದೇ ನೋಟೀಸ್ ನೀಡಲು ಕಾರಣ ಎಂದು ತಿಳಿದುಬಂದಿದೆ. ಪರಿಸರ ನಿಯಮಗಳ ಗಂಭೀರ ಉಲ್ಲಂಘನೆಯಾದ್ದರಿಂದ ಸ್ಟುಡಿಯೋವನ್ನು ತಕ್ಷಣ ಮುಚ್ಚಲು ಕೆ.ಎಸ್.ಪಿ.ಸಿ.ಬಿ KSPBC ಆದೇಶಿಸಿದೆ. ಜಲ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆ ಕಾಯ್ದೆ 1974ರ ಉಲ್ಲಂಘನೆ ಮಾಡಿರುವ ಕಾರಣ ವೆಲ್ಸ್ ಸ್ಟುಡಿಯೋಸ್ನವರು ತಮ್ಮ ಕಾರ್ಯಾಚರಣೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಬೇಕು. ರಾಮನಗರ ಜಿಲ್ಲಾಧಿಕಾರಿ ಕೂಡಲೇ ಈ ಯುನಿಟ್ ಅನ್ನು ಜಪ್ತಿ ಮಾಡಬೇಕು. ತಕ್ಷಣವೇ ಬೆಸ್ಕಾಂ ಅಧಿಕಾರಿಗಳು ಈ ಸ್ಟುಡಿಯೋಗೆ ನೀಡಿರುವ ವಿದ್ಯುತ್ ಸಂಪರ್ಕವನ್ನು ನಿಲ್ಲಿಸಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಬಿಗ್ ಬಾಸ್ ಷೋಗೆ ಸಂಕಷ್ಟ
ಇದಲ್ಲದೇ, ಪ್ರಮುಖವಾಗಿ ಬಿಗ್ ಬಾಸ್ ಶೋ ನಡೆಸಲು ಪೊಲೀಸರ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಶೋ ನಡೆಸಲು ಪೊಲೀಸರ ಯಾವುದೇ ಅನುಮತಿ ಪಡೆದಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರಿಂದ ಶೋ ಸ್ಥಗಿತಗೊಳಿಸುವಂತೆ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಎಲ್ಲಾ ಕಾರಣಗಳ ಹಿನ್ನಲೆಯಲ್ಲಿ ಬಿಗ್ ಬಾಸ್ ಶೋಗೆ ಸಂಕಷ್ಟ ಎದುರಾಗಿದೆ. ಇದನ್ನೆಲ್ಲಾ ಬಗೆಹರಿಸಿ ಪ್ರೇಕ್ಷಕರಿಗೆ ನಿರಾಸೆಯಾಗದಂತೆ ಷೋ ಮುಂದುವರೆಸುವ ಚಾಲೆಂಜ್ ವಾಹಿನಿಯ ಎದುರಿದೆ.
ಬಿಗ್ ಬಾಸ್ ಮನೆಗೂ ಅಧಿಕಾರಿಗಳು ಬೀಗ ಜಡಿದಿದ್ದು, ಎಲ್ಲಾ ಸ್ಪರ್ಧಿಗಳು ‘ಬಿಗ್ ಬಾಸ್’ ಮನೆಯಿಂದ ಹೊರಗೆ ಕರೆತಂದು ಸ್ಟುಡಿಯೋ ಆವರಣದಲ್ಲಿದ್ದ ಥಿಯೇಟರ್ ಗೆ ಕರೆತರಲಾಗಿದೆ.
ಬಿಗ್ ಬಾಸ್ ಸ್ಟುಡಿಯೋ ಬಂದ್ ಮಾಡಿ, ಚಿತ್ರೀಕರಣ ಸ್ಥಗಿತ ಮಾಡಿ ಎಲ್ಲಾ ಸ್ಪರ್ಧಿಗಳನ್ನು ಶಿಫ್ಟ್ ಮಾಡಲಾಗಿದೆ. ಸದ್ಯ ಬಿಗ್ ಬಾಸ್ ರಿಯಾಲಿಟಿ ಶೋ ನಾ ಎಲ್ಲಾ ಸ್ಪರ್ಧಿಗಳು ಹೋಟೆಲ್ ಒಂದರಲ್ಲಿ ತಂಗಿದ್ದು ಮುಂದಿನ ಒಂದೆರಡು ದಿನಗಳಲ್ಲಿ ಬೇರೆ ಸ್ಟುಡಿಯೋದಲ್ಲಿ ಬಿಗ್ ಬಾಸ್ ಶೋ ಮತ್ತೆ ನಡೆಯಲಿದೆ ಎಂದು ಕೇಳಿ ಬರುತ್ತಿದೆ.


