- ಅಪ್ಪಾಜಿ–ಅಪ್ಪು ಬಂಧ: ಆ ಮಧುರ ಕ್ಷಣಗಳ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೇಳಿದ್ದೇನು?
- ಅಪ್ಪಾಜಿಗೆ ಅಪ್ಪು ವಸ್ತುಗಳ ಬೆಲೆ ಯಾಕೆ ಹೇಳುತ್ತಿರಲಿಲ್ಲ?
- “ನಾ ಕಂಡ ಅಪ್ಪು” ಪಾಡ್ ಕಾಸ್ಟ್ ನಲ್ಲಿದೆ ಈ ಇಂಟರೆಸ್ಟಿಂಗ್ ಸಂಗತಿಗಳು !
ಪಿಆರ್ ಕೆ ಆಪ್ನಲ್ಲಿ PRK App ಪ್ರಸಾರವಾಗುತ್ತಿರುವ “ನಾ ಕಂಡ ಅಪ್ಪು” ಪಾಡ್ ಕಾಸ್ಟ್ ಸರಣಿಯಲ್ಲಿ ಪುನೀತ್ Puneeth Raj Kumar ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ Ashwini Puneeth Raj Kumar ಅವರು, ಅಣ್ಣಾವ್ರು ಮತ್ತು ಅಪ್ಪು ಕುರಿತು ಸಾಕಷ್ಟು ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದು ಈ ಸಂಗತಿಗಳು ಅಣ್ಣಾವ್ರು ಮತ್ತು ಅಪ್ಪು ಅಭಿಮಾನಿಗಳಿಗೆಲ್ಲಾ ಸಖತ್ ಥ್ರಿಲ್ಲ್ ಮೂಡಿಸುವಂತಿದೆ.
ದುಬಾರಿ ವಸ್ತುಗಳ ಬೆಲೆ ಹೇಳುತ್ತಿರಲಿಲ್ಲ
ಪುನೀತ್ ರಾಜ್ ಕುಮಾರ್ ತಮ್ಮ ತಂದೆ ಡಾ. ರಾಜ್ ಕುಮಾರ್ ಬಗ್ಗೆ ಮಾತನಾಡಿದಾಗಲೆಲ್ಲ ಅವರ ಕಣ್ಣಲ್ಲಿ ನೀರು ಉಕ್ಕುತ್ತಿತ್ತು. ಅಪ್ಪಾಜಿಯ ಜೊತೆ ವಿದೇಶ ಪ್ರವಾಸ ಹೋಗಿದ್ದದರಿಂದ ಹಿಡಿದು, ಹೊಸ ರೆಸ್ಟೋರೆಂಟ್ಗಳಲ್ಲಿ ಊಟ ಮಾಡಿದ್ದರವರೆಗೂ ಒಟ್ಟಿಗೆ ಕಳೆದ ಅನೇಕ ಸುಂದರ ಕ್ಷಣಗಳನ್ನು ಪುನೀತ್ ಹಲವಾರು ಬಾರಿ ಹಂಚಿಕೊಳ್ಳುತ್ತಲೇ ಇದ್ದರು. ಅಣ್ಣಾವ್ರಿಗೆ ದುಂದುವೆಚ್ಚ ಇಷ್ಟವಿರಲಿಲ್ಲ. ಆದರೆ ಅಪ್ಪುಗೆ ತಂದೆಗೆ ಒಳ್ಳೆಯದ್ದನ್ನೇ ಕೊಡಬೇಕು, ಶುಭ್ರ ಅಂಗಿ–ಪಂಚೆಯಲ್ಲಿದ್ದ ಅಪ್ಪಾಜಿಯನ್ನು ಒಮ್ಮೆ ಬಣ್ಣದ ಉಡುಪಿನಲ್ಲಿ ನೋಡಬೇಕು ಎಂಬ ಚಿಕ್ಕ ಆಸೆ ಇತ್ತು. ಆದರೆ ದೊಡ್ಡ ಬಿಲ್ ನೋಡಿದರೆ ಅಪ್ಪಾಜಿ ಬೇಸರಪಡುತ್ತಾರೆಂಬ ಕಾರಣಕ್ಕೆ, ಅವರಿಗೆ ತರುವ ಬಟ್ಟೆಗಳ ಬೆಲೆಯನ್ನು ಹೇಳುತ್ತಿರಲಿಲ್ಲ. ರೆಸ್ಟೋರೆಂಟ್ ಬಿಲ್ಗಳ ನಿಜವಾದ ಮೊತ್ತವನ್ನು ಪುನೀತ್ ಸರಿಯಾಗಿ ಹೇಳುತ್ತಿರಲಿಲ್ಲ.
“ನಮ್ಮ ಹಳೆಯ ಮನೆಯಲ್ಲಿ ಕೆಳಗಡೆ ಜಿಮ್ ಇತ್ತು. ಅಲ್ಲಿ ಅಪ್ಪಾಜಿ ಮತ್ತು ಅಪ್ಪು ಇಬ್ಬರೂ ವರ್ಕ್ಔಟ್ ಮಾಡುತ್ತಿದ್ದರು. ನಾನು ವಾಕಿಂಗ್ ಮುಗಿಸಿ ಬಂದು ಅವರ ಜೊತೆ ಸೇರಿಕೊಳ್ಳುತ್ತಿದ್ದೆ. ಅಪ್ಪಾಜಿಗೆ ಮಂಡಿ ನೋವು ಇತ್ತು. ಅದಕ್ಕೆ ಅಪ್ಪು 10 ಸಾವಿರ ರೂ. ಬೆಲೆಯ ಶೂ ತಂದುಕೊಟ್ಟಿದ್ದರು. ಆದರೆ ಅಪ್ಪಾಜಿಗೆ ಹೇಳಿದ್ದು?“ಇವು 200 ರೂ. ಶೂ!” ಎಂದು. ಅಪ್ಪಾಜಿಗೆ ನಿಜವಾದ ಬೆಲೆ ಗೊತ್ತಾದ್ರೆ ಹಾಕುವುದೇ ಇಲ್ಲವೆಂದು ಅಪ್ಪುವಿಗೆ ಗೊತ್ತಿತ್ತು.ಎಂದು ಅಶ್ವಿನಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಸರಳತೆಯ ಆ ಮಧುರ ನೆನಪುಗಳು
ಇನ್ನೊಂದು ನೆನೆಪನ್ನು ಅಶ್ಚಿನಿ ಅವರು ಬಿಚ್ಚಿಟ್ಟಿದ್ದಾರೆ. ಅದೇನೆಂದರೆ, ಅಪ್ಪಾಜಿ ಸಿನಿಮಾ ನೋಡಲು ಹೋದಾಗ ಮನೆಯ ಕೆಲಸಗಾರರನ್ನೂ ಜೊತೆ ತೆಗೆದುಕೊಂಡು ಹೋಗುತ್ತಿದ್ದರಂತೆ.“ಅವರು ನಮ್ಮ ಮನೆಗೆ ಕೆಲಸ ಮಾಡ್ತಾರೆ, ಅವರಿಗೆ ಮನರಂಜನೆ ಬೇಕು”ಎಂಬ ಅವರ ಮಾತು ನಿಜಕ್ಕೂ ಅಪ್ಪಾಜಿಯ ದೊಡ್ಡತನ ತೋರಿಸುತ್ತದೆ ಎಂದು ಅಶ್ವಿನಿ ಹೇಳಿಕೊಂಡಿದ್ದಾರೆ. ಪಾಡ್ ಕಾಸ್ಟ್ ನಲ್ಲಿ ಅಶ್ವಿನಿ ಅವರು ಹಂಚಿಕೊಂಡ ಈ ನೆನಪುಗಳಿಗೆ ಕೇಳುಗರು ಖುಷಿಪಟ್ಟಿದ್ದಾರೆ.


