- ಕೆಜಿಎಫ್ ಚಾಚಾ ಖ್ಯಾತಿಯ ಹರೀಶ್ ರಾಯ್ ನಿಧನ
- ಖ್ಯಾತ ನಟನ ಸಾವಿಗೆ ಕಂಬನಿ ಮಿಡಿದ ಅಭಿಮಾನಿಗಳು
- ಖಳನಾಯಕನಾಗಿ ಮಿಂಚಿದ ಹರೀಶ್ ರಾಯ್
ಕನ್ನಡದ ಪ್ರಮುಖ ಚಿತ್ರಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಜನರ ಪ್ರೀತಿ ಗಳಿಸಿದ್ದ ಹರೀಶ್ ರಾಯ್ Harish Rai ಅವರು ಗುರುವಾರ ನಿಧನರಾದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಕಳೆದ ಕೆಲವು ಸಮಯದಿಂದ ಹರೀಶ್ ರಾಯ್ ಅವರು ಕ್ಯಾನ್ಸರ್ Cancer ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಅವರ ಅನಾರೋಗ್ಯ ಉಲ್ಬಣಿಸಿದಾಗ ಚಿತ್ರರಂಗದವರು ಅವರ ಸಹಾಯಕ್ಕೆ ನಿಂತಿದ್ದರು. ಆದರೂ ಕೂಡ ಹರೀಶ್ ರಾಯ್ ಅವರ ಚಿಕಿತ್ಸೆ ಫಲಿಸಲಿಲ್ಲ.
90 ರ ದಶಕದಿಂದ ಸಿನಿ ಪಯಣ
ಬೆಂಗಳೂರಿನಲ್ಲಿ ವಾಸವಾಗಿದ್ದ ಹರೀಶ್ ರಾಯ್ ಅವರು ಮೂಲತಃ ಉಡುಪಿಯ ಅಂಬಲಪಾಡಿಯವರು, ಉಡುಪಿಯ ಜನಪ್ರಿಯ ಚಿನ್ನಾಭರಣ ಮಳಿಗೆಯಾದ ನೊವೆಲ್ಟಿ ಜ್ಯುವೆಲ್ಲರ್ಸ್ ಕುಟುಂಬ ಇವರದ್ದು. ಹರೀಶ್ ಆಚಾರ್ಯ ಇವರ ಮೂಲ ಹೆಸರಾಗಿದ್ದು, ಬೆಂಗಳೂರಿನಲ್ಲಿ ಚಿತ್ರರಂಗವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದರು. 90ರ ದಶಕದಿಂದಲೂ ಸಕ್ರಿಯರಾಗಿದ್ದ ಇವರು, ಓಂ, ಕೆಜಿಎಫ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಖಳನಟನಾಗಿ ನಟಿಸಿದ್ದರು. ಅಲ್ಲದೇ ರಾಜ್ ಬಹದ್ದೂರ್, ನನ್ನ ಕನಸಿನ ಹೂವೆ, ಮೀಂದುಮ್ ಒರು ಕಾದಲ್ ಕಧೈ, ಜೋಡಿ ಹಕ್ಕಿ, ತಾಯವ್ವ, ಅಂಡರ್ ವರ್ಲ್ಡ್, ನಲ್ಲ, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ಸೇರಿದಂತೆ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದರು. ಹರೀಶ್ ರಾಯ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಂದ ಹಾಗೆ ಉಡುಪಿಯ ಅಂಬಲಪಾಡಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ನವೆಂಬರ್ 7 ರಂದು ಉಡುಪಿಯಲ್ಲಿ ಹರೀಶ್ ರಾಯ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.


