- ಮುಗ್ಧ ಪ್ರೀತಿಯನ್ನು ಕಾಡಿಸುವ “ಪೆಟಲ್ಸ್”
- ಶರತ್ ರಾಯ್ಸದ್ ನಿರ್ದೇಶನದಲ್ಲಿ ಮೂಡಿಬಂದಿದೆ ಅದ್ಭುತ ಕಿರುಚಿತ್ರ
- ನೋಡುಗರನ್ನು ಆಲೋಚನೆಯ ಆಳಕ್ಕೆ ಕರೆದೊಯ್ಯುತ್ತದೆ “ಪೆಟಲ್ಸ್”
ರಿಷಭ್ ಶೆಟ್ಟಿ ಫಿಲ್ಮ್ಸ್ Rishabh Shetty Films ಯೂಟ್ಯೂಬ್ ಚಾನಲ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಕಿರುಚಿತ್ರ “ಪೆಟಲ್ಸ್” Petals. ಶರತ್ ರಾಯ್ಸದ್ Sharayh Raysad ಆಕ್ಷನ್ ಕಟ್ ಹೇಳಿದ್ದು ಕಿರುಚಿತ್ರ ಅದ್ಭುತವಾಗಿ ಮೂಡಿಬರುವಂತೆ ಹಲವರು ಚಿತ್ರತಂಡದಲ್ಲಿ ಶ್ರಮಿಸಿದ್ದಾರೆ. ಗೋತಮ್ ಸಿದ್ಧಾರ್ಥ್ Gotham Siddharth ಛಾಯಾಗ್ರಹಣ, ಸುಮೇದ್ ಕೆ Sumedh K ಸಂಗೀತ, ಸುಹಾಸ್ ಕೆ.ಎಸ್. ರಾವ್, ಸುನಿಲ್ ಎಸ್ ಭಾರದ್ವಾಜ್ ಸಂಕಲನ ಚಿತ್ರಕ್ಕೆ ಮೆರುಗು ತಂದಿದೆ.
ಪೋಷಕರು ಗಮನಿಸಲೇಬೇಕಾದ ಅಂಶ ಇಲ್ಲಿದೆ.
ತಮ್ಮ ಮಕ್ಕಳನ್ನು ಶಾಲೆ, ಮನೆ, ಟ್ಯೂಷನ್ ಎಂದು ಅದೇ ವರ್ತುಲದಲ್ಲಿ ಬೆಳೆಸುತ್ತಾ, ಇಬ್ಬರೂ ತಮ್ಮ ಆಫೀಸು, ಕೆಲಸಗಳಲ್ಲಿ ಬ್ಯುಸಿ ಆಗಿ, ಸುತ್ತಲಿನ ಸಣ್ಣಸಣ್ಣ ಖುಷಿಗಳನ್ನು ಮಕ್ಕಳಿಗೆ ಅನುಭವಿಸಲು ಬಿಡದೇ ಸಮೃದ್ಧ ಬಾಲ್ಯವನ್ನೇ ಕೊಡದೆ ಕಳೆದುಹೋಗುತ್ತಾರೆ. ಮಕ್ಕಳನ್ನು ಸಂತೆ, ಮಾರ್ಕೆಟ್ಟು, ಬಸ್ ಸ್ಟಾಂಡ್, ರೈಲ್ವೇ ನಿಲ್ದಾಣ, ಜಾತ್ರೆ ಇವುಗಳಿಗೆ ತೆರೆದುಕೊಳ್ಳಲು ಅವಕಾಶವೇ ಕೊಡದೇ, ಮುಖ್ಯವಾಗಿ ಮಕ್ಕಳ ಬೇಕು-ಬೇಡಗಳಿಗೆ ಸ್ಪಂದಿಸದೇ, ಮಕ್ಕಳ ನಲಿವಿಗೆ ಹೆಗಲಾಗದೇ, ಮಾನಸಿಕ ಖುಷಿಯ ಬಗ್ಗೆಯೇ ಯೋಚಿಸದೇ ಯಾಂತ್ರಿಕವಾಗುತ್ತಾ ಮುಗ್ಧ ಬಾಲ್ಯವನ್ನೇ ಹೊರೆಯಾಗಿಸುತ್ತಾರೆ.
ಈ ಎಲ್ಲವುಗಳ ನಡುವೆ ಅಜ್ಜಿ ಎಂಬ ಹಿತವಾದ ಜೀವ ಮಕ್ಕಳಿಗೆ ಕೊಡುವ ನೆಮ್ಮದಿಯೇ ಅನನ್ಯ. ಹೀಗೆ ಅಜ್ಜಿ ಸಿಕ್ಕಾಗ ತನ್ನನ್ನು ತಾನು ಕಂಡುಕೊಳ್ಳುವ, ನಗುವ, ಅಚ್ಚರಿಪಡುವ, ಸಂಭ್ರಮಿಸುವ, ಹಚ್ಚಿಕೊಳ್ಳುವ ಮೊಮ್ಮಗನ ಕಥೆಯನ್ನು ಗಾಢವಾಗಿ ಕಣ್ಣಿಗೆ ಕಟ್ಟಿದಂತೆ ಈ ಕಿರುಚಿತ್ರದಲ್ಲಿ ಹೇಳಲಾಗಿದೆ. ಇಲ್ಲಿ ಕಳೆದುಕೊಳ್ಳುತ್ತಿರುವ ಜಗತ್ತೂ ಇದೆ, ಮಹಾನಗರದಲ್ಲಿ ಬದುಕುತ್ತಿರುವ ಹೆತ್ತವರಿಗೆ ಒಂದು ಪಾಠವೂ ಇದೆ. ಮಕ್ಕಳನ್ನು ಬೆಳೆಸಬೇಕಾದ ಕ್ರಮ, ಅವರಿಗೆ ನೀಡಬೇಕಾದ ಮಮತೆ, ಅಕ್ಕರೆ, ಸಮಯ ಇವೆಲ್ಲವನ್ನೂ ಸಿನಿಮಾ ಆಳವಾಗಿ ಹೇಳುತ್ತದೆ.
ಅಜ್ಜಿಯಾಗಿ ಪಾರವ್ವ, ಮೊಮ್ಮಗನಾಗಿ ಆಯುಷ್ ಹೆಗ್ಡೆ ತಮ್ಮ ಪಾತ್ರಗಳಿಗೆ ಜೀವ ತುಂಬಿ ನ್ಯಾಯ ಒದಗಿಸಿದ್ದಾರೆ. ಇಬ್ಬರ ಸಹಜ ನಟನೆ ಚಿತ್ರದ ಕೊನೆಯಲ್ಲಿ ನೋಡುಗರ ಕಣ್ಣನ್ನು ಆರ್ದ್ರವಾಗಿಸುತ್ತದೆ. ಖಂಡಿತವಾಗಿ ಎಲ್ಲರೂ ನೋಡಲೇಬೇಕಾದ ಅದ್ಭುತ, ಕೇವಲ 30 ನಿಮಿಷಗಳ ಕಿರುಚಿತ್ರ “ಪೆಟಲ್ಸ್”.