- ಬಿಡುಗಡೆ ಆಯ್ತು “ಪುಟ್ಟಣ್ಣನ ಕತ್ತೆ” ಫಸ್ಟ್ ಲುಕ್ ಪೋಸ್ಟರ್
- ಸಿದ್ದು ಪೂರ್ಣಚಂದ್ರ ನಿರ್ದೇಶನದ ಈ ಚಿತ್ರದಲ್ಲಿ ಕತ್ತೆಯೇ ಹೀರೋ…
- ಪೂರ್ಣಚಂದ್ರ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗ್ತಿದೆ ಈ ಚಿತ್ರ
“ಪುಟ್ಟಣ್ಣನ ಕತ್ತೆ” Puttannana Katte ಎಂಬ ವಿಶಿಷ್ಟ ಹೆಸರಿನ ಚಿತ್ರವೊಂದು ಸೆಟ್ಟೇರಿದ್ದು, ಚಿತ್ರದ ಫಸ್ಟ್ ಲುಕ್ ಫೋಸ್ಟರ್ ಬಿಡುಗಡೆಯಾಗಿದೆ. ಸಿದ್ದು ಪೂರ್ಣಚಂದ್ರ Siddu Poornachandra ಆಕ್ಷನ್ ಕಟ್ ಹೇಳಲಿರುವ ಈ ಚಿತ್ರದ ಪೋಸ್ಟರ್ನಲ್ಲಿ ಕತ್ತೆಯನ್ನು ತೋರಿಸಲಾಗಿದೆ. ಈ ಚಿತ್ರದ ಕುರಿತು ಪರಿಕಲ್ಪನೆ ಹುಟ್ಟಿದ ಬಗ್ಗೆ ಹಂಚಿಕೊಂಡ ನಿರ್ದೇಶಕರು, “ಎಲ್ಲರೂ ಶ್ವಾನಗಳ ಬಗ್ಗೆ ಚಿತ್ರ ಮಾಡ್ತಾರೆ. ಹಾಗಾಗಿ ನಾನೇಕೆ ಕತ್ತೆಯೊಂದರ ಚಿತ್ರ ಮಾಡಬಾರದು ಎಂದು ಯೋಚಿಸಿದೆ. ತದನಂತರ ಈ ಚಿತ್ರದ ಕಲ್ಪನೆ ಹೊಳೆಯಿತು. ಹಾಗಾಗಿ ಈ ಬಾರಿ ಕತ್ತೆ ಚಿತ್ರದ ಕೇಂದ್ರಬಿಂದುವಾಗಿದೆ. ಶ್ವಾನಗಳಿಗಿಂತಲೂ ವಿನಮ್ರ ಕತ್ತೆಯೊಂದರಲ್ಲಿ ಹಿರೋನನ್ನು ಕಂಡುಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ.
ಸವಾಲಿನಿಂದ ಶೂಟಿಂಗ್ ಸಾಧಿಸಿದೆ ತಂಡ
ಹಳ್ಳಿಯೊಂದರ ಕತ್ತೆಯ ಪ್ರಯಾಣ ಮತ್ತು ಅದು ಸುತ್ತಲಿನ ಜನರೊಂದಿಗೆ ಬೆಳೆಸಿಕೊಳ್ಳುವ ಬಾಂಧವ್ಯದ ಸುತ್ತ ಸುತ್ತುತ್ತದೆ ಚಿತ್ರ. ಮಾನವ-ಪ್ರಾಣಿ ಸಂಬಂಧ ಸಹಾನೂಭೂತಿ, ಘನತೆ ಮತ್ತು ಸಾಮಾಜಿಕ ನಿಯಮಗಳೊಂದಿಗೆ ಕಥೆ ಸಾಗುತ್ತದೆ. ಕತ್ತೆಯೊಂದಿಗೆ ಶೂಟಿಂಗ್ ಸುಲಭದ ಮಾತಲ್ಲ. ಆದರೆ ಸವಾಲಿನಿಂದ ಕೂಡಿದ ಇದನ್ನು ಸಾಧಿಸಿದೆ ಚಿತ್ರತಂಡ. ಚಿತ್ರದಲ್ಲಿ ಅನೀಶ್ ಆರ್ಯನ್, ಭೀಮೇಶ್, ಲಿಯೋ ಶರ್ಮಾ ಮತ್ತು ವಿಭಾ ವಂದನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರ. ತನ್ಮಯ್ ಎಸ್ ಗೌಡರಿಂದ ಪೂರ್ಣಚಂದ್ರ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರಕ್ಕೆ ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ.