- ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ: ವೈರಲ್ ಆಯ್ತು ಭಾವುಕ ಸಂದೇಶ
- ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಸುಂದರ ಚಿತ್ರಗಳು.
- ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಮಂದಣ್ಣ ಮಾತುಗಳು ಇಲ್ಲಿವೆ
ತಮ್ಮ ಜೀವನದಲ್ಲಿ ವಿಜಯ್ ದೇವರಕೊಂಡ ಎಷ್ಟು ಪ್ರಮುಖ ವ್ಯಕ್ತಿ ಎಂಬುದನ್ನು ಈ ರೀತಿ ಹೃದಯಸ್ಪರ್ಶಿಯಾಗಿ ವಿವರಿಸಿದ್ದಾರೆ ರಶ್ಮಿಕಾ.
“ನನ್ನ ಜೀವನ ಸಂಗಾತಿ ವಿಜಯ್ ದೇವರಕೊಂಡ ಅವರನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ನಿಜವಾದ ಪ್ರೀತಿ ಅಂದರೆ ಏನು ಎಂಬುದನ್ನು ನನಗೆ ತಿಳಿಸಿದವರು ಅವರು. ಮನಶಾಂತಿಯಿಂದ ಬದುಕುವುದು ಹೇಗೆ ಎಂಬುದನ್ನು ಕಲಿಸಿದವರು. ದೊಡ್ಡ ಕನಸುಗಳನ್ನು ಕಾಣಲು ಪ್ರೇರೇಪಿಸಿದವರು. ಯಾರೂ ನೋಡುತ್ತಿಲ್ಲ ಎಂಬಂತೆ ನಾನು ಮುಕ್ತವಾಗಿ ನೃತ್ಯ ಮಾಡುವುದನ್ನು ಎಂದಿಗೂ ತಡೆಯದವರು. ಸ್ನೇಹಿತರೊಂದಿಗೆ ಪ್ರಯಾಣಿಸುವ ಸಂತೋಷವನ್ನು ಪರಿಚಯಿಸಿದವರು. ಇವರ ಬಗ್ಗೆ ನಾನು ಒಂದು ಪುಸ್ತಕವೇ ಬರೆಯಬಹುದು” ಎಂದು ವಿಜಯ್ ಅವರ ವ್ಯಕ್ತಿತ್ವವನ್ನು ಅವರು ಕೊಂಡಾಡಿದ್ದಾರೆ.
ಕನಸು ಕಂಡಿದ್ದ ವ್ಯಕ್ತಿಯಾಗಲು ಕಾರಣ
“ನಾನು ನಿಜವಾಗಿಯೂ ಭಾಗ್ಯವಂತಳು. ನಿನ್ನ ಬಗ್ಗೆ ಇರುವ ಭಾವನೆಗಳನ್ನು ಹೇಳಲು ಪದಗಳು ಸಾಲುವುದಿಲ್ಲ. ಅದನ್ನು ನಾನು ಈಗಾಗಲೇ ನಿನಗೆ ಹೇಳಿದ್ದೇನೆ. ನನ್ನ ಸಾಧನೆ, ನೋವು, ಸಂತೋಷ, ದುಃಖ ಎಲ್ಲಕ್ಕೂ ಈಗ ಅರ್ಥ ಸಿಕ್ಕಿದೆ, ಏಕೆಂದರೆ ಈಗ ನೀನು ನನ್ನ ಜೊತೆಯಲ್ಲಿದ್ದೀಯ. ನನ್ನ ಜೀವನದ ಭಾಗವಾಗಿರುವೆ. ನಿನ್ನ ಹೆಂಡತಿಯಾಗಿರುವುದಕ್ಕೆ ನನಗೆ ಅಪಾರ ಸಂತೋಷ. ಇದು ಸಂಭ್ರಮಿಸುವ ಕ್ಷಣ, ಅತ್ಯುತ್ತಮ ಜೀವನವನ್ನು ನಾವು ಜೊತೆಯಾಗಿ ಸಾಗಿಸೋಣ. ಐ ಲವ್ ಯೂ” ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಅಭಿನಂದನೆಗಳ ಸುರಿಮಳೆ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಗಳಿಸಿ,ಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ವಿಜಯ್ ದೇವರಕೊಂಡ ದಂಪತಿಗಳಿಗೆ ಅಭಿಮಾನಿಗಳು ಮತ್ತು ಸ್ನೇಹಿತರು ಅಭಿನಂದನೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.


