- ಪ್ರಜ್ವಲ್ ದೇವರಾಜ್ ನಟನೆಯ “ಕರಾವಳಿ” ರಿಲೀಸ್ ಡೇಟ್ ಪ್ರಕಟ
- ನಾಯಕನಾಗಿ ಪ್ರಜ್ವಲ್ ದೇವರಾಜ್ ಗೆ 40 ನೇ ಸಿನಿಮಾ
- ದಕ್ಷಿಣ ಕನ್ನಡ ಭಾಗದ ಕತೆ “ಕರಾವಳಿ”
ಗುರುದತ್ ಗಾಣಿಗ ಅವರ ನಿರ್ದೇಶನವಿರುವ, ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ದಕ್ಷಿಣ ಕನ್ನಡ ಭಾಗದ ಆಚಾರ, ಸಂಪ್ರದಾಯ, ಸಂಸ್ಕೃತಿ ಗಳನ್ನು ಬಿಂಬಿಸುವ ಕಥಾಹಂದರವಿರುವ ಚಿತ್ರ “ಕರಾವಳಿ”. ಡಿಸೆಂಬರ್ 10 ರಂದು ಮಂಗಳೂರಿನಲ್ಲಿ ಅದ್ಧೂರಿ ಸಮಾರಂಭದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ಚಿತ್ರ 2025 ರ ಫೆಬ್ರವರಿ 7 ರಂದು ಬಿಡುಗಡೆಗೊಳ್ಳಲಿದೆ. ಪ್ರಜ್ವಲ್ ದೇವರಾಜ್ ಅವರು ನಾಯಕನಾಗಿ ನಟಿಸುತ್ತಿರುವ 40 ನೇ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಸಚಿನ್ ಬಸ್ರೂರು ಅವರ ಸಂಗೀತ ಹಾಗೂ ಪ್ರವೀಣ್ ಕಲ್ ಅವರ ಸಂಕಲನವಿದೆ.
ಒಂದು ಕುರ್ಚಿಯ ಕತೆ?
ಟೀಸರ್ ನಲ್ಲಿ ಒಂದು ಕುರ್ಚಿ ಹೈಲೈಟ್ ಆಗಿದೆ. ಇದರಲ್ಲಿ ಒಂದು ಪಿಶಾಚಿಯ ಪ್ರಸ್ತಾಪವಿದೆ. ಆದರೆ ಆ ಪಿಶಾಚಿ ಭೂತ, ಪ್ರೇತ ಅಲ್ವೇ ಅಲ್ಲ. ಒಂದು ಕುರ್ಚಿಯೇ ಇಲ್ಲಿ ಪಿಶಾಚಿ ಇರಬಹುದು ಎಂಬ ಸೂಕ್ಷ್ಮ ಉಲ್ಲೇಖವಿದೆ. ಕುರ್ಚಿಯ, ಅಧಿಕಾರದ ಪಿತ್ತ ನೆತ್ತಿಗೇರಿದರೆ ಒಬ್ಬ ವ್ಯಕ್ತಿ ಏನಾಗಬಹುದು ಎಂಬುದರ ಕುರಿತು ಇರಬಹುದೇ ಎಂದೆಲ್ಲಾ ತಲೆಗೆ ಹುಳ ಬಿಟ್ಟುಕೊಂಡು ಯೋಚಿಸುವಂತೆ ಮಾಡುತ್ತದೆ ಈ ಟೀಸರ್. ಅದರೊಂದಿಗೆ ಕಂಬಳದ ಕೋಣವೂ ಅಲ್ಲಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಕಂಬಳದ ಕುರಿತೂ ಚಿತ್ರ ಬಿಂಬಿಸಬಹುದೇ ಎಂಬ ಪ್ರಶ್ನೆಯೂ ಮೂಡುತ್ತದೆ. ಇದಕ್ಕೆಲ್ಲಾ ಉತ್ತರ ಕಂಡುಕೊಳ್ಳಲು ಫೆಬ್ರವರಿ 7 ರ ತನಕ ಕಾಯಬೇಕಿದೆ.
