- ಏಪ್ರಿಲ್ 18 ಕ್ಕೆ ತೆರೆಯ ಮೇಲೆ ಮೊಳಗಲಿದೆ “ವೀರ ಚಂದ್ರಹಾಸ” ನ ಅಟ್ಟಹಾಸ
- ರವಿ ಬಸ್ರೂರು ನಿರ್ದೇಶನದಲ್ಲಿ ಮೂಡಿಬರುತ್ತಿರುವ “ವೀರಚಂದ್ರಹಾಸ” ಏಪ್ರಿಲ್ 18 ಕ್ಕೆ ತೆರೆಗೆ
- ತೆರೆಮೇಲೆ ಮಿಂಚಲಿದ್ದಾರೆ ಹಲವು ಯಕ್ಷಗಾನ ಕಲಾವಿದರು
ಯಕ್ಷಗಾನ ಅಭಿಮಾನಿಗಳಿಗೆ ಮಾತ್ರವಲ್ಲದೆ ಸಿನಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿರುವ “ವೀರಚಂದ್ರಹಾಸ” Veera Chandrahasa ಸಿನಿತಂಡ ಯಕ್ಷಗಾನದ ವೈಭವವನ್ನು ತೆರೆಗೆ ತರುವ ಹೊಸಪ್ರಯತ್ನ ಮಾಡಿದೆ. ನಿರ್ದೇಶಕ ರವಿ ಬಸ್ರೂರ್ Ravi Basrur ಅವರ ಹಲವು ವರ್ಷಗಳ ಕನಸಿನ ಫಲವಾಗಿ ಬೆಳ್ಳಿತೆರೆಯ ಮೇಲೆ ಈ ಚಿತ್ರ ಬರಲಿದ್ದು, ದೊಡ್ಡ ತೆರೆಯ ಮೇಲೆ ಹಲವು ಕಲಾವಿದರನ್ನು ಒಳಗೊಂಡ ಯಕ್ಷಗಾನದ ವೈಭವ ಮಿಂಚಲಿದೆ.
ಕುಂತಲ ದೇಶದ ರಾಜನ ಕಥೆ
ಕುಂತಲ ದೇಶದ ರಾಜ ಚಂದ್ರಹಾಸ. ಭಿಕ್ಷುಕನಾಗಿದ್ದವನು ರಾಜನಾಗುವ ಹಂತಕ್ಕೆ ತಲುಪುವ ವೀರ ಕಥೆಯನ್ನು ವಿಶಿಷ್ಟವಾಗಿ, ಯಕ್ಷಗಾನ ಶೈಲಿಯಲ್ಲಿ ಹೇಳುವ ಪ್ರಯತ್ನವೇ ಈ ಚಿತ್ರದ ಕಥಾಹಂದರ. ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ನೋಡುಗರಿಗೆ ರೋಮಾಂಚನವನ್ನು ಉಂಟುಮಾಡುತ್ತದೆ. ಇದು ಕೇವಲ ಯಕ್ಷಗಾನ ಪ್ರಿಯರಿಗೆ ಮಾತ್ರವಲ್ಲದೇ, ಯಕ್ಷಗಾನದ ಗಂಧಗಾಳಿ ಇಲ್ಲದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಸೂಕ್ಷ್ಮವಾಗಿ ಕಥೆ, ಚಿತ್ರಕಥೆ ಹೆಣೆದು ಚಿತ್ರೀಕರಣ ನಡೆಸಲಾಗಿದೆ ಎಂದಿದ್ದಾರೆ ನಿರ್ದೇಶಕ ರವಿ ಬಸ್ರೂರ್.
ರಂಗದ ಮೇಲೆ ಯಕ್ಷಕಲಾವಿದರು
ಹಲವು ಯಕ್ಷಗಾನದ ಕಲಾವಿದರು ಚಿತ್ರದಲ್ಲಿ ಮಿಂಚಿದ್ದಾರೆ. ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್., ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ ಕಡಬಾಳ್, ರವೀಂದ್ರ ದೇವಾಡಿಗ, ನಾಗರಾಜ್ ಸರ್ವೆಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಕೋಡು, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್ ಮುಂತಾದವರು ತಾರಾಗಣದಲ್ಲಿದ್ದು, ನಾಡಪ್ರಭು ಪುಟ್ಟಸ್ವಾಮಿ ಪಾತ್ರದಲ್ಲಿ ಶಿವರಾಜ್ ಕುಮಾರ್ Shivaraj Kumar ಕಾಣಿಸಿಕೊಂಡಿರುವುದು ವಿಶೇಷ ಆಕರ್ಷಣೆಯಾಗಿದೆ. ಇದೇ ಏಪ್ರಿಲ್ 18 ರಂದು ರಂಗದ ಮೇಲೆ ವೀರ ಚಂದ್ರಹಾಸನ ಅಟ್ಟಹಾಸ ಮೊಳಗಲಿದೆ.