ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ಮ್ಯಾಕ್ಸ್ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಸೆನ್ಸಾರ್ ಮಂಡಳಿಯಿಂದಲೂ U/A ಸರ್ಟಿಫಿಕೇಟ್ ಸಿಕ್ಕಿದೆ. ಡಿಸೆಂಬರ್ 25 ರಂದು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ತೆಲಗು ಮತ್ತು ತಮಿಳು ಆವೃತ್ತಿಗಳು ಡಿಸೆಂಬರ್ 27ರಂದು ಬಿಡುಗಡೆಯಾಗಲಿದೆ. ಪ್ರಮೋಷನ್ ಕಾರ್ಯ ಭರದಿಂದ ಆರಂಭವಾಗಿದೆ.
ಚಿತ್ರತಂಡ ಚಿತ್ರದ ಒಂದು ಹಾಡು ಹಾಗೂ ಎರಡು ಟೀಸರ್ ಗಳನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು, ಇನ್ನುಳಿದ ಹಾಡುಗಳನ್ನು ಬಿಡುಗಡೆಗೊಳಿಸಲು ಡಿ. 15 ರಂದು ಸಂಜೆ ಒರಾಯನ್ ಮಾಲ್ ನಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಟ್ರೈಲರ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಮತ್ತೊಮ್ಮೆ ಖಡಕ್ ಪಾತ್ರದಲ್ಲಿ ಸುದೀಪ್
ತಮಿಳಿನ ಹೊಸ ಪ್ರತಿಭೆ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಬಹುನಿರೀಕ್ಷಿತ ಮಾಕ್ಸ್ ಚಿತ್ರ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಕಿಚ್ಚ ಸುದೀಪ್ ಗೆ ಇದು 46 ನೇ ಚಿತ್ರವಾಗಿದೆ. ಮತ್ತೊಮ್ಮೆ ಖಡಕ್ ಪಾತ್ರದಲ್ಲಿ, ಪೋಲಿಸ್ ಆಫೀಸರ್ ಆಗಿ ಮಿಂಚಲಿದ್ದಾರೆ. ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ, ಹಿಂದಿ, ತೆಲಗು ಮತ್ತು ಮಳಯಾಳಂ ಭಾಷೆಗಳಲ್ಲಿ ಡಬ್ ಆಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ.
ಕಲೈಪುಲಿ ಎಸ್ ತನು ಜೊತೆ ಕಿಚ್ಚ ಕ್ರಿಯೇಷನ್ಸ್ ಸಂಸ್ಥೆ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದೆ. ಕೆ.ಜಿ.ಆರ್. ಸ್ಟುಡಿಯೋಸ್ ಸಂಸ್ಥೆ ಚಿತ್ರದಗೆ ಚಿತ್ರದ ವಿತರಣೆಯ ಹಕ್ಕು ನೀಡಲಾಗಿದೆ. ಸಂಯುಕ್ತ ಹೊರನಾಡು, ಉಗ್ರಂ ಮಂಜು, ವರಲಕ್ಷ್ಮೀ ಶರತ್ಕುಮಾರ್, ರವಿಶಂಕರ್ ಪಿ, ಸುನಿಲ್, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಅರ್ಜುನ್ ಬಿ.ಆರ್, ಸುಕೃತಾ ವಾಗ್ಲೆ ಮುಂತಾದವರು ತಾರಾಗಣದಲ್ಲಿದ್ದಾರೆ.
2024 ರ ಕೊನೆಗೊಂದು ಬಹುನಿರೀಕ್ಷಿತ ಚಿತ್ರ
ಬಿಡುಗಡೆಗೂ ಮುನ್ನವೇ ಕ್ರೇಜ್ ಹುಟ್ಟಿಸಿರುವ ಈ ಚಿತ್ರ ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಅಲ್ಲದೇ ನಾಯಕಿಯೇ ಇಲ್ಲದ ಚಿತ್ರ ಎಂಬುದು ವಿಶೇಷವಾಗಿದೆ. ಕ್ರಿಸ್ ಮಸ್ ನ ದಿನ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದ್ದು, ಯುಐ ಚಿತ್ರದ ಜೊತೆಗೆ ಮ್ಯಾಕ್ಸ್ ಚಿತ್ರವೂ ಅಬ್ಬರಿಸಲಿದೆಯೇ ಕಾದು ನೋಡಬೇಕಿದೆ.