- ಕನ್ನಡದ ಸಿನಿರಸಿಕರ ಮನದಲ್ಲೂ ಕಾಡಿದ್ದ ನಾನಾ ಪಾಟೇಕರ್
- ‘ಯಕ್ಷ’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ವಿಶಿಷ್ಟ ಪಾತ್ರ
- ಒಂದೇ ಒಂದು ಕನ್ನಡ ಚಿತ್ರದಲ್ಲೂ ಗಮನಸೆಳೆಯೋ ನಟನೆ
ಅಭಿನಯಕ್ಕೆ ಭಾಷೆಯ ಗಡಿ ಇಲ್ಲ ಎಂಬುದನ್ನು ತಮ್ಮ ಪ್ರತಿಭೆಯ ಮೂಲಕವೇ ಸಾಬೀತುಪಡಿಸಿದ್ದ ಹಿರಿಯ ನಟ ನಾನಾ ಪಾಟೇಕರ್ Nana Patekar ನಮ್ಮನ್ನಗಲಿದ್ದಾರೆ. ಈ ಬಹುಭಾಷಾ ನಟ ಕನ್ನಡ ಸಿನಿಮಾದಲ್ಲೂ kannada cinema ತಮ್ಮ ವಿಶಿಷ್ಟ ಛಾಪು ಮೂಡಿಸಿದ್ದರು. ಹಿಂದಿ, ಮರಾಠಿ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಅವರು, ಕನ್ನಡದಲ್ಲಿ ನಟಿಸಿದ್ದು ಒಂದೇ ಒಂದು ಚಿತ್ರವಾದರೂ, ಆ ಪಾತ್ರ ಮಾತ್ರ ಕನ್ನಡಿಗರ ನೆನಪಿನಲ್ಲಿ ಸದಾ ಅಚ್ಚಳಿಯದೆ ಉಳಿದಿದೆ.
‘ಯಕ್ಷ’ದಲ್ಲಿ ಮಿಂಚಿದ್ದ ದಕ್ಷ ಪೊಲೀಸ್ ಅಧಿಕಾರಿ:
2010ರಲ್ಲಿ ‘ಲೂಸ್ ಮಾದ’ ಯೋಗೇಶ್ Loosmada Yogesh ಅಭಿನಯದ ‘ಯಕ್ಷ’ Yaksha ಚಿತ್ರದ ಮೂಲಕ ನಾನಾ ಪಾಟೇಕರ್ ಚಂದನವನಕ್ಕೆ ಕಾಲಿಟ್ಟಿದ್ದರು. ರಮೇಶ್ ಭಾಗವತರ್ ನಿರ್ದೇಶನದ, ಟಿ.ಪಿ. ಸಿದ್ದರಾಜು ನಿರ್ಮಾಣದ ಈ ಚಿತ್ರದಲ್ಲಿ ಅವರು ಡಿಸಿಪಿ ಯೋಗರಾಜ್ ಪುಲಕೇಶಿ ಎಂಬ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಾಮಾಣಿಕತೆ, ದಕ್ಷತೆ ಮತ್ತು ಧೈರ್ಯಕ್ಕೆ ಮತ್ತೊಂದು ಹೆಸರಿನಂತಿದ್ದ ಯೋಗರಾಜ್ ಪುಲಕೇಶಿ, ಭೂಗತ ಲೋಕದ ವಿರುದ್ಧ ಸೆಡ್ಡು ಹೊಡೆಯುವ ಪೊಲೀಸ್ ಅಧಿಕಾರಿ. ‘ಕಲಿಯುಗದ ಪರಶುರಾಮ’ನಂತೆ ಬಿಂಬಿಸಲಾಗಿದ್ದ ಈ ಪಾತ್ರಕ್ಕೆ ನಾನಾ ಪಾಟೇಕರ್ ಅವರ ಗಂಭೀರ ನೋಟ, ಖಡಕ್ ಧ್ವನಿ ಹಾಗೂ ವಿಭಿನ್ನ ಅಭಿನಯ ಮತ್ತಷ್ಟು ತೂಕ ನೀಡಿತ್ತು.
ಕಥೆಗೆ ತಿರುವು ಕೊಟ್ಟ ಪಾತ್ರ:
ಚಿತ್ರದ ದ್ವಿತೀಯಾರ್ಧದಲ್ಲಿ ನಾನಾ ಪಾಟೇಕರ್ ಪಾತ್ರ ಪ್ರವೇಶಿಸುವುದೇ ಕಥೆಗೆ ದೊಡ್ಡ ತಿರುವು. ಭೂಗತ ಪಾತಕಿ ಮಚ್ಚೇಂದ್ರನಾಥ್ ಪೂಂಜಾ (ಅತುಲ್ ಕುಲಕರ್ಣಿ) ಸಂಚು ರೂಪಿಸಿ ಯೋಗರಾಜ್ ಪುಲಕೇಶಿಯನ್ನು ಹತ್ಯೆ ಮಾಡುತ್ತಾನೆ. ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳಲು ನಾಯಕ ಯಕ್ಷ ಭೂಗತ ಲೋಕಕ್ಕೆ ಕಾಲಿಡುವುದು ಚಿತ್ರದ ಪ್ರಮುಖ ಕಥಾಹಂದರ.
ಕನ್ನಡ ಭಾಷೆಯ ಮೇಲೆ ಪ್ರೀತಿ:
‘ಯಕ್ಷ’ದಲ್ಲಿ ನಾನಾ ಪಾಟೇಕರ್ ಅವರ ಅಭಿನಯಕ್ಕಿಂತಲೂ ಕನ್ನಡಿಗರನ್ನು ಹೆಚ್ಚು ಅಚ್ಚರಿಗೊಳಿಸಿದ್ದು ಅವರ ಕನ್ನಡದ ಮೇಲಿನ ಪ್ರಯತ್ನ. ತಮ್ಮ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಿಕೊಳ್ಳದೆ, ನಾನಾ ಪಾಟೇಕರ್ ಸ್ವತಃ ಕನ್ನಡ ಕಲಿತು ತಮ್ಮ ಸಂಭಾಷಣೆಗಳಿಗೆ ಧ್ವನಿ ನೀಡಿದ್ದರು. ಶೂಟಿಂಗ್ ವೇಳೆ ಸಂಭಾಷಣೆಗಳನ್ನು ಮರಾಠಿ ಅಥವಾ ಹಿಂದಿಯಲ್ಲಿ ಬರೆದುಕೊಂಡು, ಕನ್ನಡದಲ್ಲಿ ಉಚ್ಚರಿಸುತ್ತಿದ್ದ ಅವರು, ಕೇವಲ ಎರಡು ದಿನಗಳಲ್ಲಿ ಸಂಪೂರ್ಣ ಡಬ್ಬಿಂಗ್ ಪೂರ್ಣಗೊಳಿಸಿದ್ದರು. ಅಷ್ಟೇ ಅಲ್ಲ, ಬಾಲಿವುಡ್ನ ತಮ್ಮ ಜನಪ್ರಿಯ ‘ಯಶ್ವಂತ್’ ಚಿತ್ರದ “ಏಕ್ ಮಚ್ಚರ್ ಸಾಲಾ…” ಎಂಬ ಪ್ರಸಿದ್ಧ ಡೈಲಾಗ್ನ ಕನ್ನಡ ರೂಪಾಂತರವನ್ನೂ ‘ಯಕ್ಷ’ದಲ್ಲಿ ಹೇಳಿ ಗಮನ ಸೆಳೆದಿದ್ದರು. ಯೋಗೇಶ್ ಜೊತೆ ಯೋಗರಾಜ್ ಭಟ್ Yogaraj Bhat ಬರೆದ ಯುವಜನತೆಗೆ ಸಂದೇಶ ಸಾರುವ ಹಾಡಿಗೆ ಹೆಜ್ಜೆ ಹಾಕಿ ಮತ್ತಷ್ಟು ರಂಜಿಸಿದ್ದರು. ಅಂತೂ ನಾನಾ ಪಾಟೇಕರ್ ಕನ್ನಡ ಚಿತ್ರರಂಗಕ್ಕೂ ಸ್ಪೂರ್ತಿಯಾದದ್ದು ವಿಶೇಷ.


