- ಮಂಡ್ಯದ ಮಣ್ಣಿನ ಕಥೆ… ರಗಡ್ ಲುಕ್‌ನಲ್ಲಿ ಮೂಡಿಬರಲಿದೆ “ಮದರ್”!
- 34 ದಿನ, ಹಗಲು-ರಾತ್ರಿ ಶೂಟಿಂಗ್ ಮುಗಿಸಿ ಇದೀಗ ಪೋಸ್ಟ್ ಪ್ರೊಡಕ್ಷನ್‌ಗೆ “ಮದರ್”!
- ಅನಕ್ಷರಸ್ಥ ಮಹಿಳೆಯ ಹೋರಾಟದ ಕಥೆ; ನವೆಂಬರ್‌ನಲ್ಲಿ ತೆರೆಗೆ
ಒಬ್ಬ ಅನಕ್ಷರಸ್ಥ ಮಹಿಳೆ ತನ್ನ ಸಂಸಾರವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟ ವಿಭಿನ್ನ ಕಥಾಹಂದರದ ಚಿತ್ರ, ಶಾಂತು ಯುನಿವರ್ಸಲ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಮದರ್”. ಕೆ. ಸತೀಶ್ ಚಂದ್ರ, ಎಲೆಕೆರೆ ಬಂಡವಾಳ ಹೂಡಿದ್ದು, ರಾಕೇಶ್ ಸೋಮಣ್ಣ Rakesh Somanna ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ವಿಶೇಷವೆಂದರೆ, ಜೂನ್ 18ರಂದು ಚಿತ್ರೀಕರಣ ಆರಂಭಿಸಿ ಜುಲೈ 22ರಂದು ಚಿತ್ರೀಕರಣ ಪೂರ್ಣಗೊಳಿಸಲಾಗಿದ್ದು, ಕೇವಲ 34 ದಿನಗಳಲ್ಲಿ ಹಗಲು-ರಾತ್ರಿ ಎನ್ನದೆ ನಿರಂತರ ಪರಿಶ್ರಮದೊಂದಿಗೆ ಇಡೀ ಸಿನಿಮಾವನ್ನು ಶೂಟ್ ಮಾಡಲಾಗಿದೆ.
ಜೂನ್ 10ರಂದು ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ನಟ ವಿನೋದ್ ಪ್ರಭಾಕರ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಸಿನಿಮಾಗೆ ಶುಭ ಕೋರಿದ್ದರು.
ಮಂಡ್ಯದ ಅನಕ್ಷರಸ್ಥ ಮಹಿಳೆಯ ಹೋರಾಟದ ಕಥೆ
‘ಮದರ್’ Mother Movie ಸಿನಿಮಾದ ಕಥೆಯ ಹಿನ್ನೆಲೆ ಮಂಡ್ಯ. ಒಬ್ಬ ಅನಕ್ಷರಸ್ಥ ಮಹಿಳೆ ತನ್ನ ಸಂಸಾರವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟವೇ ಚಿತ್ರದ ಪ್ರಮುಖ ಕಥಾಹಂದರ. ಇದು ಕೇವಲ ಕಣ್ಣೀರು ಹಾಕಿಸುವ ತಾಯಿಯ ಕಥೆಯಲ್ಲ. ಬದಲಾಗಿ ಬದುಕಿನ ಸವಾಲುಗಳ ನಡುವೆ ಕುಟುಂಬಕ್ಕಾಗಿ ಹೋರಾಡುವ, ಪರಿಸ್ಥಿತಿಗೆ ತಕ್ಕಂತೆ ಗಟ್ಟಿಯಾಗಿ ನಿಲ್ಲುವ ಮಹಿಳೆಯ ಕಥೆ. ಮಂಡ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಚಿತ್ರತಂಡಕ್ಕಿದೆ ಇವರೆಲ್ಲರ ಬಲ

ಒಂದು ಸಿನಿಮಾ ಇಷ್ಟು ಕಡಿಮೆ ಅವಧಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸುವ ಹಿಂದೆ ನಿರ್ದೇಶಕರ ಯೋಜನೆ ಎಷ್ಟು ಮುಖ್ಯವೋ, ಅದೇ ರೀತಿ ನಿರ್ಮಾಪಕರ ಬೆಂಬಲವೂ ಅಷ್ಟೇ ಮುಖ್ಯ. ನಿರ್ಮಾಪಕ ಕೆ. ಸತೀಶ್ ಚಂದ್ರ ಅವರು ಚಿತ್ರತಂಡಕ್ಕೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದು, ಲಾಭ-ನಷ್ಟದ ಲೆಕ್ಕಾಚಾರಕ್ಕಿಂತ ಸಿನಿಮಾ ಮಾಡುವ ಉತ್ಸಾಹಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿರ್ಮಾಪಕರಾಗಿ ಸತೀಶ್ ಚಂದ್ರ ಅವರು ಗುರುತಿಸಿಕೊಂಡು, ತಮ್ಮ ಸಿನಿಮಾ ಪ್ರೀತಿಯನ್ನು ತೋರಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮೂರುವರೆ ದಶಕಕ್ಕೂ ಹೆಚ್ಚು ಕಾಲದಿಂದ ತಮ್ಮದೇ ಛಾಪು ಮೂಡಿಸಿರುವ ಶ್ರುತಿ Shruti ಮುಖ್ಯಪಾತ್ರದಲ್ಲಿದ್ದು, ಅವರಿಗೆ ಇದು 175 ನೇ ಸಿನಿಮಾ. ಅವರೊಂದಿಗೆ ಅಭಯ್ ಪುನೀತ್, ಬಲರಾಜ್‌ವಾಡಿ, ಚಿರಂಜೀವಿ, ಹೇಮಾ ದತ್, ಪ್ರಸನ್ನ ಶೆಟ್ಟಿ, ಹಿಮಶ್ರೀ, ಅರ್ಚನಾ ಹೆಗ್ಡೆ, ಗೀತಾಂಜಲಿ ಹಾಗೂ ರೋಹಿತ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಮದರ್’ ಸಿನಿಮಾಗೆ ಪ್ರತಿಭಾವಂತ ತಂತ್ರಜ್ಞರ ತಂಡವೂ ಕೈಜೋಡಿಸಿದ್ದು, ಅಂಜನ್ ಸಂಗೀತ ಸಂಯೋಜನೆ, ಯು. ಅಶ್ವಿನ್ ಛಾಯಾಗ್ರಹ, ವಸಂತ್ ಸಂಕಲನ, ನಾಗಾರ್ಜುನ ಶರ್ಮಾ ಸಾಹಿತ್ಯವಿದೆ. 34 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿರುವ ‘ಮದರ್’ ಇದೀಗ ಎಡಿಟಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ನಿರ್ದೇಶಕ ರಾಕೇಶ್ ಸೋಮಣ್ಣ ಅವರ ಯೋಜನೆಯಂತೆ ಎಲ್ಲ ಕೆಲಸಗಳು ಅಂದುಕೊಂಡಂತೆ ನಡೆದರೆ ನವೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.




